ಮಂಗಳೂರು: ರಾಜ್ಯ ಸರ್ಕಾರ ಸಮಾಜದಲ್ಲಿ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದೆ. ಮೂರು ದಶಕಗಳ ಹಿಂದಿನ ಪ್ರಕರಣವನ್ನು ಮರು ತನಿಖೆಗೆ ತೆಗೆದುಕೊಂಡಿರುವುದನ್ನು ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಿಂದೂಗಳ ಅಸ್ಮಿತೆಯನ್ನು ತುಳಿಯುವ ಪ್ರಯತ್ನ ಮಾಡಿದರೆ ಪರಿಣಾಮ ಎದುರಿಸಬೇಕಾದೀತು ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಎಚ್ಚರಿಸಿದ್ದಾರೆ.'
ಹುಬ್ಬಳ್ಳಿಯಲ್ಲಿ ಮೂರು ದಶಕಗಳ ಹಿಂದೆ ರಾಮ ಮಂದಿರ ಹೋರಾಟದಲ್ಲಿ ಭಾಗಿಯಾಗಿದ್ದ 75 ವರ್ಷದ ಕರಸೇವಕ ಶ್ರೀಕಾಂತ್ ಪೂಜಾರಿ ಎಂಬವರನ್ನು 31 ವರ್ಷಗಳ ಬಳಿಕ ಬಂಸಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಬುಧವಾರ ನಗರದ ಮಿನಿ ವಿಧಾನಸೌಧದ ಮುಂಭಾಗ ನಡೆದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಗೆ ಕೋಟ್ಯಂತರ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಈ ನಡುವೆ ಕರಸೇವಕ ಶ್ರೀಕಾಂತ ಪೂಜಾರಿಯವರನ್ನು ಬಂಧಿಸಿರುವ ವಿಷಯ ಆಘಾತ ತಂದಿದೆ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ, ಕಾಂಗ್ರೆಸ್ ಶ್ರೀರಾಮ ಭಕ್ತರ ಮೇಲೆ ತನ್ನ ದರ್ಪ ಪ್ರದರ್ಶಿಸುತ್ತಿದೆ. ಇದನ್ನು ಬಿಜೆಪಿ ಸಹಿಸುವುದಿಲ್ಲ. ದುರುದ್ದೇಶ ಪೂರಿತ ರಾಜಕಾರಣಕ್ಕೆ ಜನತೆಯೇ ಉತ್ತರ ನೀಡಲಿದ್ದಾರೆ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಬಿಜೆಪಿ ವಕ್ತಾರ ಜಗದೀಶ್ ಶೇಣವ, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ಸತೀಶ್ ಕುಂಪಲ, ಕಸ್ತೂರಿ ಪಂಜ, ರಾಮದಾಸ ಬಂಟ್ವಾಳ, ಹರಿಕೃಷ್ಣ ಬಂಟ್ವಾಳ, ಕ್ಯಾಪ್ಟನ್ ಬೃಜೇಶ್ ಚೌಟ, ಸಂತೋಷ್ ಕುಮಾರ್ ರೈ ಬೋಳಿಯಾರ್, ಸಂದೇಶ್ ಶೆಟ್ಟಿ, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ವಿಜಯ್ ಕುಮಾರ್ ಶೆಟ್ಟಿ, ಶಕಿಲಾ ಕಾವಾ, ರೂಪಾ ಡಿ. ಬಂಗೇರ ಮೊದಲಾದವರಿದ್ದರು.