ಮಂಗಳೂರು: ಸಂಸ್ಕೃತ ಭಾರತೀ ಮಂಗಳೂರು ವತಿಯಿಂದ ಗೀತಾ ಜಯಂತಿಯ ಪ್ರಯುಕ್ತ ಗೀತಾಮೃತಮ್ ಅಖಂಡ ಗೀತಾ ಪಾರಾಯಣ ಕಾರ್ಯಕ್ರಮವು ಭಾನುವಾರ ನಗರದ ಸಂಘನಿಕೇತನದಲ್ಲಿ ನಡೆಯಿತು.
ಕ್ಷೇತ್ರೀಯ ಸಂಘ ಚಾಲಕ ಡಾ. ವಾಮನ್ ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ವಿಧಾನ ಪರಿಷತ್ ಸದಸ್ಯ ಭೋಜೆಗೌಡ ಮಾತನಾಡಿ, ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಭಗವದ್ಗೀತೆಯ ಪುಸ್ತಕವು ಇರಬೇಕು ಹಾಗೂ ಪ್ರತಿಯೊಬ್ಬ ಹಿಂದೂ ಭಗವದ್ಗೀತೆಯನ್ನು ಓದುವುದು ಅವಶ್ಯಕವಾಗಿದೆ ಎಂದರು.
ನಿಕಟಪೂರ್ವ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು. ಸಂಸ್ಕೃತ ಭಾರತೀಯ ಅಧ್ಯಕ್ಷ ಡಾ. ವೇಣುಗೋಪಾಲ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರು ಶ್ರೀಮದ್ ಭಗವದ್ಗೀತೆಯ ಮಹತ್ವದ ಬಗ್ಗೆ ವಿಶೇಷ ಪ್ರವಚನ ನೀಡಿದರು. ಗೀತೆಯು ಕೃಷ್ಣಾರ್ಜುನರ ಸಂವಾದ ಮಾತ್ರವಲ್ಲದೆ ಪ್ರತಿಯೊಬ್ಬ ಮನುಷ್ಯನ ಬದುಕಿನ ಅಂತರಾಳದ ತುಮುಲ ಹಾಗೂ ಅದಕ್ಕೆ ನಿರ್ಧಿಷ್ಟ ಪರಿಹಾರ ಎಂದರು.
ಪ್ರಾಂತ ಸಂಪರ್ಕ ಪ್ರಮುಖ ಸತ್ಯನಾರಾಯಣ ಕೆ.ವಿ. ಉಪಸ್ಥಿತರಿದ್ದರು. ಪೂರ್ಣ 700 ಶ್ಲೋಕಗಳ ಪಾರಾಯಣ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಅಧಿಕ ಜನರು ಭಾಗವಹಿಸಿದ್ದರು. ಸಂಸ್ಕೃತ ಭಾರತೀಯ ಸದಸ್ಯ ಡಾ.ಮಧುಕೇಶ್ವರ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಶೀಲಾ ಶಂಕರಿ ಸ್ವಾಗತಿಸಿದರು. ಗಜಾನನ ಬೋವಿಕಾನ ವಂದಿಸಿದರು, ಮಹಾನಗರ ಸಂಯೋಜಕಿ ಸಂಧ್ಯಾ ಕಾಮತ್ ಹಾಗೂ ಇತರ ಸದಸ್ಯರು ಕಾರ್ಯಕ್ರಮ ಸಂಯೋಜಿಸಿದರು. ಗಣಪತಿ ಪೈ ಪಾರಾಯಣ ನಡೆಸಿಕೊಟ್ಟರು.