ಜಿಲ್ಲೆ

ಕನ್ನಡ ಭಾಷೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಕನ್ನಡ ರಾಜ್ಯೋತ್ಸವದಲ್ಲಿ ಪ್ರಾಧ್ಯಾಪಕ ಪುಷ್ಪರಾಜ್ ಕೆ.

ಮಂಗಳೂರು: ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಸಮೃದ್ಧವಾಗಿರುವ ಕನ್ನಡ ಭಾಷೆಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಎಸ್. ಡಿ.ಎಂ. ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ಹೋಬಳಿಯ ಮುಖ್ಯಸ್ಥ ಪುಷ್ಪರಾಜ್ ಕೆ ಹೇಳಿದರು.

ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶದ ಸಹಯೋಗದಲ್ಲಿ ನಡೆದ 69ನೇ ಕನ್ನಡ ರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಕರಾವಳಿ ಭಾಗದಲ್ಲಿ ಕನ್ನಡ ಭಾಷೆಗೆ ಪ್ರೋತ್ಸಾಹದ ಕೊರತೆ ಎದುರಾಗುತ್ತಿದ್ದು ಈ ಬಗ್ಗೆ ಕನ್ನಡಿಗರು ಗಂಭೀರವಾಗಿ ಚಿಂತಿಸಿ ಶೈಕ್ಷಣಿಕ ವಲಯದಲ್ಲಿ ವಿದ್ಯಾರ್ಥಿಗಳಿಗೆ ಭಾಷಾಭಿಮಾನವನ್ನು ಬೆಳೆಸಿ ಸಾಹಿತ್ಯದ ಪರಂಪರೆಯನ್ನು ವಿಸ್ತರಿಸುವ ಕೆಲಸವಾಗಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಪ್ರವೀಣ್ ಕುಮಾರ್ ಕೆ.ಸಿ. ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳು ಸೇರಿದಂತೆ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಗಿರಿಯಪ್ಪ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾಕ್ಷಿ ನಾಡಗೀತೆ ಹಾಡಿದರು. ಸಹಾಯಕ ಪ್ರಾಧ್ಯಾಪಕ ರವಿರಾಜ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಧ್ಯಾಪಕಿ ಜ್ಞಾನೇಶ್ವರಿ ಯಂ. ವಂದಿಸಿದರು.