ಮಂಗಳೂರು: ಅಂಗನವಾಡಿಗಳ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಮುಖ್ಯ ಎಂದು ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಿ.ಆನಂದ ತಿಳಿಸಿದ್ದಾರೆ.
ಅವರು ಗುರುವಾರದಂದು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಮಂಗಳೂರಿನ ಬಿಜೈ ಕಾಪಿಕಾಡ್ ಅಂಗನವಾಡಿ ಶಾಲೆಗೆ ಕೊಡುಗೆಯಾಗಿ ನೀಡಿರುವ ನೀರು ಶುದ್ಧೀಕರಣ ಯಂತ್ರದ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರ ಗಳು ಮಕ್ಕಳ ಅಪೌಷ್ಟಿಕತೆ ನಿವಾರಣೆಯ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಮುಖ ಕೇಂದ್ರ. ಇಂತಹ ಅಂಗನವಾಡಿ ಕೇಂದ್ರ ಸಮುದಾಯದ ಜನರ ಜೊತೆ ನಿಕಟ ಸಂಪರ್ಕದಲ್ಲಿದ್ದು ಅಲ್ಲಿನ ಜನರು ಅಂಗನವಾಡಿಯ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾರೆ. ಅಂತಹ ಅಂಗನವಾಡಿ ಕೇಂದ್ರಗಳು ಕ್ರೀಯಾಶೀಲ ಕೇಂದ್ರವಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರ ಒಂದು ಮಾದರಿ ಕೇಂದ್ರವಾಗಿದೆ. ಕೇಂದ್ರಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಪ್ರಭಾಕರ ಅವರು ನೀರು ಶುದ್ಧೀಕರಣ ಯಂತ್ರ ಕೊಡುಗೆ ನೀಡಿರುವುದು, ಮಕ್ಕಳಿಗೆ ದಾನಿಗಳ ಮೂಲಕ ಸಮವಸ್ತ್ರ, ಅಂಗನವಾಡಿಗೆ ಬೇಕಾದ ಇತರ ಸಾಮಾಗ್ರಿಗಳನ್ನು ಒದಗಿಸಿಕೊಡಲು ಮುಂದೆ ಬರುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್., ಕಾರ್ಯಕಾರಿ ಸಮಿತಿ ಸದಸ್ಯ ಸಂದೇಶ್ ಜಾರ, ಸದಸ್ಯ ವೆಂಕಟೇಶ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸಾಕು, ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ನಂದಾ ಉಪಸ್ಥಿತರಿದ್ದರು. ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.