Gavel on desk. Isolated with good copy space. Dramatic lighting. 
ಜಿಲ್ಲೆ

ಜಮೀನಿನಲ್ಲಿ ಪಾಲು ವಿವಾದ ತಮ್ಮನ ಕೊಲೆಗೈದ ಅಣ್ಣನಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಜಮೀನಿನಲ್ಲಿ ಪಾಲು ಕೇಳಲು ಮನೆಗೆ ಬಂದಿದ್ದ ತನ್ನ ಸ್ವಂತ ತಮ್ಮನನ್ನೇ ಹೊಡೆದು ಕೊಲೆ ಮಾಡಿದ್ದ ಅಪರಾಧಿ ಅಣ್ಣನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್.ಜಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರದಂದು ತೀರ್ಪು ನೀಡಿದ್ದಾರೆ.


ಬಂಟ್ವಾಳ ತಾಲೂಕು ಕನ್ಯಾನ ಗ್ರಾಮದ ನಂದರಬೆಟ್ಟುವಿನ ಐತಪ್ಪ ನಾಯ್ಕ ಯಾನೆ ಪುಟ್ಟು ನಾಯ್ಕ (45) ಶಿಕ್ಷೆಗೊಳಗಾದವನು. ಈತ ತನ್ನ ತಮ್ಮ ಬಾಳಪ್ಪ ಯಾನೆ ರಾಮ ನಾಯ್ಕ(35) ಅವರನ್ನು ಕೊಲೆ ಮಾಡಿದ್ದ.


ಪ್ರಕರಣದ ಹಿನ್ನೆಲೆ:
2022ರ ಮೇ 10ರಂದು ನಂದರಬೆಟ್ಟುವಿನಲ್ಲಿ ತನ್ನ ಚಿಕ್ಕಪ್ಪನ ಮನೆಯಲ್ಲಿ ಪೂಜೆ ಇದ್ದ ಕಾರಣ ಬಾಳಪ್ಪ ನಾಯ್ಕ ಅವರು ಬಂದಿದ್ದರು. ಅಲ್ಲಿಯೇ ಪಕ್ಕದಲ್ಲಿ ತನ್ನ ಕುಟುಂಬದ ಮನೆ ಇತ್ತು. ಅಲ್ಲಿ ಅಣ್ಣ ಐತಪ್ಪ ನಾಯ್ಕ ನೆಲೆಸಿದ್ದ. ಹಾಗಾಗಿ ಬಾಳಪ್ಪ ನಾಯ್ಕ ಅಲ್ಲಿಗೆ ಹೋಗಿದ್ದರು. ಅಲ್ಲಿ ಜಮೀನಿನ ವಿಚಾರವಾಗಿ ಮಾತುಕತೆ ನಡೆದು ಪಾಲಿನ ವಿಷಯ ಪ್ರಸ್ತಾಪವಾಗಿತ್ತು. ಆಗ ಕ್ರೋಧಗೊಂಡ ಆರೋಪಿ ಐತಪ್ಪ ನಾಯ್ಕ ಮನೆಯಲ್ಲಿದ್ದ ಮರದ ನೊಗದಿಂದ ಬಾಳಪ್ಪ ನಾಯ್ಕ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಬಾಳಪ್ಪ ನಾಯ್ಕ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.


ತನಿಖಾಧಿಕಾರಿಯಾಗಿದ್ದ ವಿಟ್ಲ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಎಚ್.ಇ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 17 ಮಂದಿ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪೈಕಿ ಮರಣೋತ್ತರ ಪರೀಕ್ಷೆ ನಡೆಸಿದ್ದ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಡಾ.ವರ್ಷಾ ಎ.ಶೆಟ್ಟಿ ಹಾಗೂ ಎಫ್‌ಎಸ್‌ಎಲ್ ಅಧಿಕಾರಿ ಡಾ.ಗೀತಾಲಕ್ಷ್ಮೀ ಅವರ ಸಾಕ್ಷೃ ಪ್ರಮುಖವಾಗಿತ್ತು.


ನ್ಯಾಯಾಧೀಶೆ ಸುನೀತಾ ಎಸ್.ಜಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ, 50,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದರೆ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 10,000 ರೂ.ಗಳನ್ನು ಸರ್ಕಾರಕ್ಕೆ, ಉಳಿದ ಮೊತ್ತವನ್ನು ಕೊಲೆಯಾದ ಬಾಳಪ್ಪ ಅವರ ತಾಯಿ ಅವರಿಗೆ ನೀಡುವಂತೆ ಆದೇಶಿಸಿದ್ದಾರೆ. ಅಲ್ಲದೆ ಬಾಳಪ್ಪ ಅವರ ತಾಯಿ ಅವರಿಗೆ ಗರಿಷ್ಠ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕ ಹರೀಶ್ಚಂದ್ರ ಉದಿಯಾವರ್ ವಾದಿಸಿದ್ದರು.