ಜಿಲ್ಲೆ

ಮಂಗಳೂರು- ಬೆಂಗಳೂರು ಹೆಚ್ಚುವರಿ ರೈಲಿಗೆ ಮನವಿ

reportermng

ಮಂಗಳೂರು: ನಿರಂತರ ಮಳೆ ಮತ್ತು ಭೂಕುಸಿತ ಪರಿಣಾಮ ರಸ್ತೆ ಸಂಪರ್ಕ ಮಾರ್ಗ ಸಮಸ್ಯೆ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ನಡುವೆ ಹೆಚ್ಚುವರಿ ರೈಲು ಒದಗಿಸುವಂತೆ ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಅಧ್ಯಕ್ಷ, ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಹನುಮಂತ ಕಾಮತ್ ವಿಭಾಗೀಯ ರೈಲ್ವೆ ಪ್ರಬಂಧಕರಿಗೆ ಮನವಿ ಸಲ್ಲಿಸಿದ್ದಾರೆ.


ಮಂಗಳೂರು ಮತ್ತು ಬೆಂಗಳೂರು ಸಂಪರ್ಕಿಸುವ ಹತ್ತಿರದ ಶಿರಾಡಿ ಘಾಟ್ ಮಾರ್ಗ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದಿನಂಪ್ರತಿ ಉಭಯ ನಗರಗಳ ನಡುವೆ ತಲಾ ಒಂದು ಹಗಲು ರೈಲು ಮತ್ತು ರಾತ್ರಿ ರೈಲು ಇದೆ. ಈ ಮಾರ್ಗದಲ್ಲಿ ಹೆಚ್ಚುವರಿ ರೈಲಿನ ಆವಶ್ಯಕತೆ ತುಂಬಾ ಇದೆ ಎಂದು ಅವರು ಮನವಿ ಸಲ್ಲಿಸಿದ್ದಾರೆ.


ಪ್ರಸ್ತಾವಿತ ಎರಡು ನಗರಗಳ ನಡುವೆ ದಿನಂಪ್ರತಿ ಸುಮಾರು 10 ಸಾವಿರ ಜನರು ಪ್ರಯಾಣಿಸುತ್ತಿದ್ದು, ಈಗ ಸಂಚರಿಸಲು ಇರುವ ವ್ಯವಸ್ಥೆ ಸೀಮಿತವಾಗಿದೆ. ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಪ್ರಮುಖ ಕೈಗಾರಿಕೆ, ಧಾರ್ಮಿಕ ಕೇಂದ್ರ, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ವೈದ್ಯಕೀಯ- ಇಂಜಿನಿಯರಿಂಗ್ ಕಾಲೇಜುಗಳು ಇವೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.