ಮಂಗಳೂರು: ವಿದ್ಯಾರ್ಥಿನಿಯರು ಅಂತರ್ಜಾಲಗಳ ಮೂಲಕ ಕಾಲೇಜು ಗ್ರಂಥಾಲಯದಲ್ಲಿ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಶೀಘ್ರವಾಗಿ ಪಡೆಯಲು ಸಾಧ್ಯ ಎಂದು ಸಂತ ಆಗ್ನೇಸ್ (ಸ್ವಾಯತ್ತೆ) ಕಾಲೇಜಿನ ಮುಖ್ಯ ಗ್ರಂಥಾಧಿಕಾರಿ ಡಾ.ವಿಶಾಲ ಬಿ.ಕೆ. ಅಭಿಪ್ರಾಯ ಪಟ್ಟರು.
ಬಲ್ಮಠದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಾಲಯ ವೆಬ್‌ಸೈಟ್ ಉದ್ಘಾಟಿಸಿ, ಅವರು ಮಾತನಾಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಓದುಗರನ್ನು ಗಂಥಾಲಯಕ್ಕೆ ಆಕರ್ಷಿಸುವುದು ದೊಡ್ಡ ಸವಾಲಾಗಿದೆ. ಆದರೆ ಈ ಗ್ರಂಥಾಲಯ ವೆಬ್‌ಸೈಟ್‌ಗಳ ಮುಖಾಂತರ ಓದುಗರನ್ನು ತಲುಪುದರಲ್ಲಿ ಯಶಸ್ವಿಯಾಗಿದೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಅನೇಕ ಓಪನ್ ಸೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಜಗದೀಶ ಬಾಳ ಅಧ್ಯಕ್ಷತೆ ವಹಿಸಿದ್ದರು. ವೆಬ್‌ಸೈಟ್ ಬಳಕೆಯಿಂದ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯನ್ನು ಕ್ರಿಯಾತ್ಮಕವಾಗಿ ನಡೆಸಬಹುದು ಎಂದರು.
ಗೌರವ ಅತಿಥಿಗಳಾದ ಪ್ರೊ. ಶಶಿಕಲಾ. ಕೆ, ಇವರು ಡಿಜಿಟಲ್ ಕ್ರಾಂತಿಯನ್ನೇ ಸೃಷ್ಟಿಸಿರುವ ಕಾಲೇಜಿನ ಗ್ರಂಥಾಲಯ ವೆಬ್ ಸೈಟ್ ವಿದ್ಯಾರ್ಥಿನಿಯರಿಗೆ ಬೌಧ್ಧಿಕವಾಗಿ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿದೆ. ಆ ಮೂಲಕ ತಮಗೆ ಅವಶ್ಯವಿರುವ ಎಲ್ಲಾ ಮಾಹಿತಿಗಳನ್ನು ಬೆರಳ ತುದಿಯಲ್ಲೇ ಪಡೆಯುವ ಅವಕಾಶ ಕಲ್ಪಿಸಿದೆ ಎಂದರು.
ಡಾ. ಶೈಲಾರಾಣಿ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ.ವಿಶಾಲ ಬಿ.ಕೆ ಮತ್ತು ಪ್ರೊ.ಶಶಿಕಲಾ ಕೆ ಇವರಿಗೆ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಙಾನದ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಮುನೀರಾ ಸ್ವಾಗತಿಸಿದರು. ಅನನ್ಯ ವಂದಿಸಿದರು. ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.