ಮಂಗಳೂರು: ಯುವ ಮತದಾರರು ಮತದಾನದ ಮಹತ್ವವನ್ನು ಅರಿತುಕೊಂಡು ಮುಂಬರುವ ಮತದಾನದ ದಿನದಂದು ತಮ್ಮ ಹಕ್ಕು ಚಲಾಯಿಸಬೇಕು ಹಾಗೂ ಸಮಾಜದ ಇತರೆ ಜನರೂ ಮತದಾನದಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕು ಎಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಮಂಗಳೂರು ತಾಲೂಕು ಪಂಚಾಯಿತಿ ವತಿಯಿಂದ ಮಂಗಳೂರು ನಗರದ ಬಲ್ಮಠ ಸರ್ಕಾರಿ ಪದವಿ ಮತ್ತು ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾರರ ಜಾಗೃತಿ ಅಭಿಯಾನದ ಪ್ರಯುಕ್ತ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮತದಾನ ಹಾಗೂ ಚುನಾವಣಾ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಮಂಗಳೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಸಿ ಅಪ್ಪಣ್ಣ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ದ.ಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ. ಆನಂದ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಲೋಕೇಶ್, ಮಂಗಳೂರು ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮಹೇಶ್ ಅಂಬೆಕಲ್, ಸಂಪನ್ಮೂಲ ವ್ಯಕ್ತಿಗಳಾದ ತಹಸೀನ್, ಹರಿಪ್ರಸಾದ್ ಶೆಟ್ಟಿ, ಓ.ಆರ್ ಪ್ರಕಾಶ್, ಪ್ರಮೀಳಾ ರಾವ್, ನಿಶ್ಮಿತಾ, ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.