ವಿಜಯವಾಣಿ ಸುದ್ದಿಜಾಲ ಮಂಗಳೂರು
ಮಂಗಳೂರು ನಗರದಲ್ಲಿ ಆಟೋ ರಿಕ್ಷಾಗಳ ಸಂಖ್ಯೆ ಮಿತಿ ಮೀರಿದೆ. ಇಲೆಕ್ಟ್ರಿಕಲ್ ಆಟೋಗಳು ಪರವಾನಗಿ ಇಲ್ಲದೆ ಸಂಚರಿಸುತ್ತಿವೆ. ಆಟೋ ನಿಲ್ದಾಣಗಳ ಕೊರತೆ, ಆದಾಯ ಕುಸಿತ ಮುಂತಾದ ಸಮಸ್ಯೆಗಳು ತೀವ್ರವಾಗಿದ್ದು, ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿಯ ಜತೆ ಆದೇಶ ಹೊರಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಆಟೋರಿಕ್ಷಾ ಚಾಲಕ ಮಾಲೀಕರ ಸಂಘಗಳ ಒಕ್ಕೂಟವು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದೆ.
ಪ್ರಸ್ತಾವಿತ ಆದೇಶಕ್ಕೆ ಸಂಬಂಧಿಸಿ 2022, ನವೆಂಬರ್ 25 ರಂದು ಜಿಲ್ಲಾಧಿಕಾರಿಯವರು ಹೊರಡಿಸಿದ ಆದೇಶವನ್ನು ಮರುಪರಿಶೀಲಿಸಿ ಹೊಸ ಆದೇಶ ಪ್ರಕಟಿಸಲು ಉಚ್ಛ ನ್ಯಾಯಾಲಯವು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ಒಂದು ಸಭೆ ನಡೆಸಿದ್ದು, ಯಾವುದೇ ಅಂತಿಮ ತೀರ್ಮಾನ ಕೈಗೊಂಡಿರುವುದಿಲ್ಲ. ಜಿಲ್ಲಾಧಿಕಾರಿಯವರು ಕೂಡಲೇ ಈ ಬಗ್ಗೆ ಒಂದು ತೀರ್ಮಾನ ಕೈಗೊಂಡು ಉದ್ಭವಿಸಿರುವ ಗೊಂದಲಗಳಿಗೆ ಕೊನೆ ಹಾಡುವಂತೆ ಒಕ್ಕೂಟದ ಗೌರವಾಧ್ಯಕ್ಷ ಮಹಮ್ಮದ್ ಇರ್ಫಾನ್ ಹಾಗೂ ಅಧ್ಯಕ್ಷ ಅಶೋಕ್ ಶೆಟ್ಟಿ ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ನಗರದಲ್ಲಿ ಈಗಾಗಲೇ ಸುಮಾರು 8000 ತನಕ ಆಟೋಗಳು ಇದ್ದು, ಇಲೆಕ್ಟ್ರಿಕಲ್ ಆಟೋಗಳು ಪರವಾನಗಿ ಇಲ್ಲದೆ ಓಡಾಡುವುದರಿಂದ ಸಮಸ್ಯೆಯಾಗಿದೆ. ಪರಿಸರ ಸ್ನೇಹಿ ಇಲೆಕ್ಟ್ರಿಕಲ್ ಆಟೋಗಳಿಗೆ ನಾವು ವಿರೋಧವಿಲ್ಲ. ಅವುಗಳು ನಗರದಲ್ಲಿ ಈಗಾಗಲೇ ಇರುವ ಆಟೋ ಪರವಾನಗಿಯಲ್ಲಿ ಸಂಚರಿಸುವುದು ಸೂಕ್ತವಾಗಿದೆ. ಅಲ್ಲದೆ ವಲಯ- 1 ಅಲ್ಲದ ಆಟೋರಿಕ್ಷಾಗಳು ವಲಯ- 2 ರಲ್ಲಿ ಬಾಡಿಗೆ ಮಾಡಬೇಕು ಎಂದು ಒಕ್ಕೂಟದ ಗೌರವ ಸಲಹೆಗಾರ ಅರುಣ್ ಕುಮಾರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಉಪಾಧ್ಯಕ್ಷ ಶೇಖರ್ ದೇರಳಕಟ್ಟೆ, ಸದಸ್ಯ ಗೋಪಾಲ ಪೂಜಾರಿ ಉಪಸ್ಥಿತರಿದ್ದರು.