ಜಿಲ್ಲೆ

ಆದರ್ಶಪ್ರಾಯರ ಸ್ಮರಣೆಯಿಂದ ನಮಗೆ ಗೌರವ --ಯಕ್ಷ ಪ್ರತಿಭೆ ಆಸ್ರಣ್ಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇ.ಮೂ.ಲಕ್ಷ್ಮೀನಾರಾಯಣ ಆಸ್ರಣ್ಣ

ಮಂಗಳೂರು: ನಮಗೆ ಆದರ್ಶಗಳನ್ನು ಕಲಿಸಿ ಹೋದ ಹಿರಿಯರನ್ನು ಸ್ಮರಣೆ ಮಾಡುವುದರಿಂದ ನಮ್ಮ ಗೌರವ ಹೆಚ್ಚುತ್ತದೆ ಎಂದು ಕಟೀಲಿನ ಪ್ರಧಾನ ಅರ್ಚಕ ವೇ.ಮೂ. ಲಕ್ಮೀನಾರಾಯಣ ಆಸ್ರಣ್ಣ ಹೇಳಿದರು.

ಯಕ್ಷಪ್ರತಿಭೆಯ 16ನೇ ವರ್ಷದ ಆಸ್ರಣ್ಣ ಪ್ರಶಸ್ತಿ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಬೇರೆ ಬೇರೆ ಕಡೆಗಳಲ್ಲಿ ಆಸ್ರಣ್ಣರ ಸಂಸ್ಮರಣೆ ಆಗುತ್ತದೆಯಾದರೂ ನಗರದಲ್ಲಿ ಕಲಾತಪಸ್ವಿ ಸಂಜಯ ಕುಮಾರ್ ಗೋಣಿಬೀಡುರವರು ಇದನ್ನು ವ್ರತವೆಂದು ಭಾವಿಸಿ ಕಳೆದ ಹದಿನಾರು ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಶುಭ ಹಾರೈಸಿದರು.

ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು ಸ್ವಾಗತಿಸಿದರು. ದಿ.ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿಯನ್ನು ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಪ್ರದಾನ ಮಾಡಲಾಯಿತು. ಸಂಘಟಕ ಸುಧಾಕರ ರಾವ್ ಪೇಜಾವರ್ ಅಭಿನಂದನಾ ಮಾತುಗಳನ್ನಾಡಿದರು. ಅದಾನಿ ಗ್ರೂಪ್ಸ್ ನ ಕಿಶೋರ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.

ಮಂಗಳಾದೇವಿ ದೇವಸ್ಥಾನದ ಮೊಕ್ತೇಸರ ಅರುಣ್ ಐತಾಳ್ ಶುಭ ಹಾರೈಸಿದರು. ಒಡಿಯೂರು ಸೌರ್ಹಾರ್ವ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ರೈ ಮಂಗಳಾದೇವಿ ಸೇವಾ ಸಮಿತಿಯ ದಿಲ್ ರಾಜ್ ಆಳ್ವ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ಗುರುರಾಜ್ ಭಟ್, ಕೈರಂಗಳ , ವಿನಯಕುಮಾರ್ ಗುರುಪುರ ಮುಖ್ಯ ಅತಿಥಿಗಳಾಗಿದ್ದರು. ವಿಶೇಷವಾಗಿ ಡಾ. ಪದ್ಮನಾಭ ಕಾಮತ್, ಜನಾರ್ದನ ಅಮ್ಮುಂಜೆ ಮತ್ತು ಪದ್ಮನ್ನೂರು ಪದ್ಮನಾಭ ಶೆಟ್ಟಿಗಾರರನ್ನೂ ಗೌರವಿಸಲಾಯಿತು. ಲಯನ್ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವ ಪಾವಂಜೆ ಮೇಳದ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.