ಜಿಲ್ಲೆ

ರಾಸಾಯನಿಕ ರಹಿತ ಆಹಾರ ಪದ್ಧತಿಗೆ ಒತ್ತು ನೀಡಿ ಜಾಗೃತಿ ಕಾರ್ಯಕ್ರಮದಲ್ಲಿ ಲಕ್ಷ್ಮೀನಾರಾಯಣ ಹೇಳಿಕೆ

ಹರೀಶ ಎಂ.

ಮಂಗಳೂರು: ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ, ಮಂಗಳ ಮಹಿಳಾ ಮಂಡಳಿ ಮುಲ್ಲಕಾಡು, ಪ್ರಕೃತಿ ಮಹಿಳಾ ಮಂಡಳಿ ಶಕ್ತಿನಗರ ಇದರ ಸಹಯೋಗದೊಂದಿಗೆ ರಾಸಾಯನಿಕ ರಹಿತ ಆಹಾರ ಪದ್ಧತಿ ಎಂಬ ವಿನೂತನ ಕಾರ್ಯಕ್ರಮ ಉರ್ವಸ್ಟೋರ್‌ನ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ಜರುಗಿತು.

ಸಂಪನ್ಮೂಲ ವ್ಯಕ್ತಿ ಲಕ್ಷ್ಮೀನಾರಾಯಣ ಮಾತನಾಡಿ, ರಾಸಾಯನಿಕ ವಸ್ತುಗಳನ್ನು ಹಾಕದೇ ಇರುವ ಹಣ್ಣು ತರಕಾರಿ ಬಳಕೆ ಉತ್ತಮ. ಆಹಾರದ ಮೂಲ, ಆಹಾರದ ಮೌಲ್ಯ, ಆಹಾರದ ಪ್ರಮಾಣ ಇವೆಲ್ಲವನ್ನು ನಾವು ಅರಿತುಕೊಳ್ಳಬೇಕು. ನಮ್ಮ ಆರೋಗ್ಯದ ದೃಷ್ಟಿಯಿಂದ ನಾವು ಒಳ್ಳೆಯ ಆಹಾರವನ್ನು ಸೇವಿಸಬೇಕು ಎಂದರು.

ಹಿರಿಯ ಸದಸ್ಯರಾದ ನಳಿನಿ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳಾ ಮಂಡಲಗಳನ್ನು ಒಟ್ಟು ಸೇರಿಸಿ ಒಕ್ಕೂಟದಡಿ ಕಾರ್ಯಕ್ರಮ ರೂಪಿಸುವ ಯೋಜನೆಯನ್ನು ಶ್ಲಾಘಿಸಿದರು. ತನಗೆ ಹರೆಯದಲ್ಲಿ ಸಂಘ-ಸಂಸ್ಥೆಗಳಿಗೆ ಸೇರಲಾಗಲಿಲ್ಲ. ಈಗ ನಿಮ್ಮ ಕಾರ್ಯವೈಖರಿಯನ್ನು ಕಂಡಾಗ ತನಗೂ ಆಸೆಯಾಗುತ್ತದೆ ಎಂದರು.

ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ ಅಧ್ಯಕ್ಷತೆ ವಹಿಸಿದ್ದರು. ಮಂಗಳಾಮಹಿಳಾ ಮಂಡಳಿ ಅಧ್ಯಕ್ಷೆ ಪ್ರೇಮಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಒಕ್ಕೂಟದ ಗೌರವಾಧ್ಯಕ್ಷೆ ವಿಜಯಲಕ್ಷ್ಮೀ ಬಿ.ಶೆಟ್ಟಿ, ಆಶಾಲತಾ, ರೇಖಾ ಶೆಟ್ಟಿ, ಅನುರಾಧಾ ರಾಜೀವ್, ಭಾರತಿ ಮಂಜುನಾಥ, ಲತಾ ಎನ್. ಶೆಟ್ಟಿ, ಪ್ರೇಮಾ ಮಾಧವ್ ಉಪಸ್ಥಿತರಿದ್ದರು. ಶಿಲ್ಪಾ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.