ಜಿಲ್ಲೆ

ಹಿರಿಯ ನಾಗರಿಕರಿಗೆ ಮಾನಸಿಕ ಸ್ಥೈರ್ಯ ಆಧಾರ ‘ಸಿಲ್ವರ್ ಸ್ಟಾರ್’ ಉದ್ಘಾಟಿಸಿ ಕೆನರಾ ಬ್ಯಾಂಕ್ ಮಹಾ ಪ್ರಬಂಧಕ ಬಿ.ಸುಧಾಕರ ಕೊಟ್ಟಾರಿ ಅಭಿಮತ

ಮಂಗಳೂರು: ಹಿರಿಯ ನಾಗರಿಕರಿಗೆ ಮಾನಸಿಕ ಸ್ಥೈರ್ಯ ತುಂಬುವುದರ ಮೂಲಕ ಅವರನ್ನು ಮತ್ತಷ್ಟು ಕ್ರಿಯಾಶೀಲರನ್ನಾಗಿಸಬಹುದು ಎಂದು ಕೆನರಾ ಬ್ಯಾಂಕ್‌ನ ಮಹಾ ಪ್ರಬಂಧಕ ಬಿ.ಸುಧಾಕರ ಕೊಟ್ಟಾರಿ ಹೇಳಿದರು.


ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ವಯಾ ವಿಕಾಸ್ ನೋಡೆಲ್ ಕೇಂದ್ರದ ಸಹಯೋಗದಲ್ಲಿ ಶನಿವಾರ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ ಹಿರಿಯರ ಪ್ರತಿಭಾ ಪ್ರದರ್ಶನ ‘ಸಿಲ್ವರ್ ಸ್ಟಾರ್’ ಉದ್ಘಾಟಿಸಿ, ಅವರು ಮಾತನಾಡಿದರು.


ಆರೋಗ್ಯ ನಮ್ಮ ಕೈಯ್ಯಲ್ಲೇ ಇದೆ. ಅದನ್ನು ಕಾಪಡಿಕೊಳ್ಳುವುದು ಕರ್ತವ್ಯ. ಹಿರಿಯರು ಮನೆಯೊಳಗೆ ಕುಳಿತುಕೊಳ್ಳದೆ ಹೊರಗೆ ಬಂದು ಸಮಾಜದ ಜತೆ ಬೆರೆಯಬೇಕು. ಸ್ನೇಹಿತರ ಜತೆ ತಮ್ಮ ಮನಸ್ಸಿನ ಅಭಿಲಾಷೆಗಳನ್ನು ಪರಸ್ಪರ ಹಂಚಿಕೊಳ್ಳಬೇಕು. ಸಮಾರಂಭಗಳಲ್ಲಿ ಪಾಲ್ಗೊಂಡು ಸಂಭ್ರಮಿಸಬೇಕು. ಆಗ ಹೆಚ್ಚು ಆರೋಗ್ಯವಂತಾಗಿರುವ ಜತೆಗೆ ಚುರುಕಾಗಿರಲು ಸಾಧ್ಯ ಎಂದವರು ಹೇಳಿದರು.


ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಮಾತನಾಡಿ, ವಯಾ ವಿಕಾಸ್ ಹಿರಿಯರಲ್ಲಿ ನವ ಚೈತನ್ಯ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.


ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ಅಮಿತಾ ಮಾರ್ಲ ಮಾತನಾಡಿ, ವಯಾ ವಿಕಾಸ್ ನೋಡೆಲ್ ಕೇಂದ್ರದಲ್ಲಿ ಮಂಗಳೂರಿನ 700 ಮಂದಿ ಹಿರಿಯರು ನೊಂದಾಯಿಸಿಕೊಂಡಿದ್ದಾರೆ. ವೃದ್ಧಿ ಕಾರ್ಯಕ್ರಮದ ಮೂಲಕ ಹಿರಿಯರಿಗೆ ಆಹಾರದ ಕ್ರಮ, ಕೌನ್ಸಿಲಿಂಗ್, ತುರ್ತು ಚಿಕಿತ್ಸೆ, ಹೋಂ ಕೇರ್ ಮೊದಲಾದ ಸೇವೆಗಳನ್ನು ನೀಡುತ್ತಿದೆ ಎಂದರು.


ವಯಾ ವಿಕಾಸ್‌ನ ಸಿಒಒ ಪವಿತ್ರಾ ರೆಡ್ಡಿ, ಪೀಪಲ್ ಅಸೋಸಿಯೇಶನ್ ಆಫ್ ಜಿರಿಯಾಟ್ರಿಕ್ ಎಂಪವರ್‌ಮೆಂಟ್ (ಅಎಉ) ನ ಅಧ್ಯಕ್ಷ ಡಾ.ಸಿ.ವಿ.ರಘುವೀರ್, ಉಪಾಧ್ಯಕ್ಷೆ ಡಾ.ಪ್ರಭಾ ಅಧಿಕಾರಿ, ಕಾರ್ಯದರ್ಶಿ ಜೇರ್ಡಿನ್ ಡಿಸೋಜ, ಖಜಾಂಚಿ ಮೋಹನ್ ರಾಜ್, ಮನಶಾಂತಿ ಕೌನ್ಸಿಲಿಂಗ್ ತರಬೇತಿ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಡಾ.ರಮೀಳಾ ಶೇಖರ್, ಮಂಗಳೂರು ಹಿರಿಯ ನಾಗರಿಕರ ಅಸೋಸಿಯೇಶನ್‌ನ ಕಾರ್ಯದರ್ಶಿ ಶಶಿಧರ್ ಕೆ.ಎನ್., ಸ್ಥಾಪಕ ಕಾರ್ಯದರ್ಶಿ ರಮೇಶ್ ರಾವ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.


ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಲ್ ಎಡ್ಮಿನಿಸ್ಟೇಷನ್ ಪ್ರಾಂಶುಪಾಲೆ ವಿಜಯಾ ಸ್ವಾಗತಿಸಿದರು. ರೋಶೆಲ್ ಮಾಬೆನ್ ವಂದಿಸಿದರು. ನಿಖಿಲ್ ಶೆಟ್ಟಿ ಮತ್ತು ಪ್ರಿಮ್ರೋಸ್ ಕಾರ್ಯಕ್ರಮ ನಿರೂಪಿಸಿದರು.


ಹಿರಿಯ ನಾಗರಿಕರಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ವಿನೋದಾವಳಿಗಳು ನಡೆದವು.