ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣ ರನ್‌ವೇಗೆ ಸೆಂಟರ್ ಲೈಟ್‌ಗಳ ಅಳವಡಿಕೆ

ಹರೀಶ ಎಂ.

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದ ರನ್‌ವೇಗೆ ಸೆಂಟರ್ ಲೈಟ್‌ಗಳ ಅಳವಡಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಪೈಲೆಟ್‌ಗಳಿಗೆ ಆಕಾಶದಿಂದಲೇ ರನ್‌ವೇ ಗೋಚರಿಸುವ ಉದ್ದೇಶದಿಂದ 2,450 ಮೀ. ಉದ್ದದ ರನ್‌ವೇಗೆ ಸೆಂಟರ್ ಲೈಟ್‌ಗಳನ್ನು ಅಳವಡಿಲಾಗುತ್ತಿದೆ.


ಇತ್ತೀಚೆಗೆ ನಡೆದ ರನ್‌ವೇ ರಿಕಾರ್ಪೆಂಟಿಂಗ್ ಕಾಮಗಾರಿ ವೇಳೆ ಲೈಟ್ ಅಳವಡಿಕೆಗೆ ಸಂಬಂಧಿಸಿದಂತೆ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಕಾಮಗಾರಿ ಆರಂಭವಾಗಿದ್ದು, 2024ರ ಮಾರ್ಚ್ ವೇಳೆಗೆ ಕಾಮಗಾರಿ ಮುಗಿಯಲಿದೆ. ಒಟ್ಟು 160 ಸೆಂಟರ್ ಲೈಟ್‌ಗಳು ಅಳವಡಿಕೆಯಾಗಲಿದೆ. ಇದೇ ವೇಳೆ ಮುಖ್ಯ ಮತ್ತು ಸ್ಟಾಂಡ್ ಬೈ ಸರ್ಕೀಟ್ ಜತೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ರನ್‌ವೇಯು ಎರಡೂ ಭಾಗದಲ್ಲಿ ಕೇಬಲ್ ಡಕ್ಟ್‌ಗಳನ್ನು ನಿರ್ಮಿಸಲಾಗುತ್ತಿದೆ.


ಮಂಗಳೂರು ವಿಮಾನ ನಿಲ್ದಾಣ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಯೋಜನೆಯ ಅವಧಿಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣ ನೋಟಮ್ (ನೋಟಿಸ್ ಟು ಏರ್‌ಮೆನ್) ಪಡೆದಿದ್ದು, ದೈನಂದಿನ ವಿಮಾನಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ನಿಗದಿತ ಅವಧಿಯಲ್ಲೇ ಕೆಲಸಗಳು ಮುಗಿಯಲಿದೆ ಎಂದು ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.


ಏನಿದು ರನ್‌ವೇ ಸೆಂಟರ್ ಲೈಟ್
ರನ್‌ವೇಯ ಎರಡೂ ಬದಿಯಲ್ಲಿ ಮತ್ತು ರನ್‌ವೇ ಒಟ್ಟು ವ್ಯಾಪ್ತಿಗೆ ಸಂಬಂಧಿಸಿದಂತೆ ಈಗಾಗಲೇ ಲೈಟ್‌ಗಳನ್ನು ಅಳವಡಿಲಾಗಿದ್ದು, ಅವುಗಳಿಗೆ ಪೂರಕವಾಗಿ ಮಧ್ಯದಲ್ಲಿ ಸೆಂಟರ್ ಲೈಟ್‌ಗಳನ್ನು ಅಳವಡಿಲಾಗುತ್ತಿದೆ. ಇವು ಹೆದ್ದಾರಿಗಳಲ್ಲಿ ಅಳವಡಿಸುವ ಕ್ಯಾಟ್ ಐ ಮಾದರಿಯಲ್ಲಿವೆ.