ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣ 55.39 ಲಕ್ಷ ರೂ. ಮೌಲ್ಯದ ಕೆಜಿ ಚಿನ್ನ ಅಕ್ರಮ ಸಾಗಾಟ ಪತ್ತೆ

ಮಂಗಳೂರು: ಇಲ್ಲಿನ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಮತ್ತು ಮಂಗಳವಾರ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಒಟ್ಟು 55,39,810 ರೂ. ಮೌಲ್ಯದ 1087.250 ಗ್ರಾಂ ಅಕ್ರಮ ಸಾಗಾಟದ ಚಿನ್ನವನ್ನು ಪತ್ತೆ ಮಾಡಿದ್ದಾರೆ.


ಸೋಮವಾರ ದುಬಾಯಿಂದ ಆಗಮಿಸಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದ ಕಾಸರಗೋಡು ಮೂಲದ ಪ್ರಯಾಣಿಕನ ಬಳಿ 9,74,080 ರೂ. ಮೌಲ್ಯದ 190.250 ಗ್ರಾಂ ತೂಕದ 24 ಕ್ಯಾರೆಟ್ ಪರಿಶುದ್ಧ ಚಿನ್ನ ಪತ್ತೆಯಾಗಿದೆ. ಈತ ಅಂಟು ಬಳಸಿ ಚಿನ್ನದ ಪೌಡರನ್ನು ಕಾಗದಕ್ಕೆ ಅಂಟಿಸಿ, ಕಾರ್ಬನ್ ಶೀಟ್‌ನಲ್ಲಿ ಕಟ್ಟಿ ಬಾಕ್ಸ್‌ನೊಳಗೆ ಇಟ್ಟು ಸಾಗಾಟ ಮಾಡಿದ್ದ. ತಪಾಸಣೆ ವೇಳೆ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.


ಸೋಮವಾರ ದುಬಾಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೂವರು ಪ್ರಯಾಣಿಕರಿಂದ 897 ಗ್ರಾಂ ತೂಕದ 45,65,730 ರೂ, ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಚಪ್ಪಲಿಯೊಳಗಿಟ್ಟು ಸಾಗಾಟ ಮಾಡಿದ್ದರು. ಎರಡೂ ಪ್ರಕರಣದಲ್ಲಿ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನವನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.