ಮಂಗಳೂರು:‘ಆದಿತ್ಯ ರಾವ್’ ರೀತಿ ತಾನೂ ಪ್ರಚಾರ ಪಡೆಯಬೇಕು ಎನ್ನುವ ಉದ್ದೇಶದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬೆದರಿಕೆ ಕೆರೆ ಮಾಡಿದ್ದೆ ಎಂದು ಬಂಧಿತ ಆರೋಪಿ ಕಾರ್ಕಳ ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ(33) ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಮೊಬೈಲ್ ಹೆಚ್ಚು ಬಳಸುತ್ತಿದ್ದ ಆರೋಪಿ ಗೂಗಲ್ ಸರ್ಚ್ ಮಾಡಿ ವಿಮಾನ ನಿಲ್ದಾಣದ ಹಿಂದಿನ ನಿರ್ದೇಶಕ ವಾಸುದೇವ ರಾವ್ ಅವರ ಮೊಬೈಲ್ ನಂಬರ್ ಪಡೆದ. ಅದರಂತೆ ಆ.19ರಂದು ಮಧ್ಯಾಹ್ನ 1ಗಂಟೆ 5 ನಿಮಿಷಕ್ಕೆ ಅವರಿಗೆ ಕರೆ ಮಾಡಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಸಿದ. ತಕ್ಷಣ ಕಾರ್ಯಪ್ರವೃತ್ತರಾದ ರಾವ್ ಈ ವಿಚಾರವನ್ನು ಹಾಲಿ ನಿರ್ದೇಶಕ ವಿ.ವಿ.ರಾವ್ ಅವರಿಗೆ ತಿಳಿಸಿದರು. ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪೊಲೀಸರ ಸಹಕಾರದೊಂದಿಗೆ ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಿದರೂ, ಬಾಂಬ್ ಪತ್ತೆಯಾಗಲಿಲ್ಲ. ದೂರವಾಣಿ ಕರೆ ಆಧಾರದ ಮೇಲೆ ಉಡುಪಿ ಪೊಲೀಸರ ಸಹಾಯ ಪಡೆದು ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ವಿರುದ್ಧ ವಿಮಾನ ನಿಲ್ದಾಣ ಭದ್ರತಾ ಕಾಯ್ದೆ ಹಾಗೂ ಐಪಿಸಿ ಸೆಕ್ಷನ್‌ಗಳ ಅಡಿ ಬೇಲ್ ರಹಿತ ಪ್ರಕರಣ ದಾಖಲಿಸಲಾಗಿದೆ. ಈತ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.