ಜಿಲ್ಲೆ

ಅಡ್ಯಾರ್‌ಪದವು ಶ್ರೀ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶ ಪೂರ್ವಭಾವಿ ಸಭೆ

ಮಂಗಳೂರು: ಅಡ್ಯಾರ್‌ಪದವು ಶ್ರೀ ಚಂಡಿಕಾದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪೂರ್ವಭಾವಿ ಸಭೆ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ರಚನೆ ಭಾನುವಾರ ಅಡ್ಯಾರ್‌ಪದವಿನ ವೃಕ್ಷರಾಜ ಸಭಾಭವನದಲ್ಲಿ ನಡೆಯಿತು.

ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮನೋಜ್ ಪೂಜಾರಿ ಅವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ರಚನೆ ಮಾಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಶ್ರವಣ್ ಶೆಟ್ಟಿ ಮೊಗರುಗುತ್ತು, ಗೌರವಾಧ್ಯಕ್ಷರಾಗಿ ಶಾಸಕ ಡಾ.ವೈ. ಭರತ್ ಶೆಟ್ಟಿ, ಸುರೇಂದ್ರ ಕಂಬಳಿ ಅವರನ್ನು ಆಯ್ಕೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಶ್ರವಣ್ ಶೆಟ್ಟಿ ಅವರು, ಚಂಡಿಕಾದುರ್ಗಾಪರಮೇಶ್ವರಿ ಅಮ್ಮನ ಬ್ರಹ್ಮಕಲಶೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸೋಣ ಎಂದರು.

ಕ್ಷೇತ್ರದ ಪ್ರಧಾನ ತಂತ್ರಿ ಸೀತಾರಾಮ ಆಚಾರ್ಯ ಅವರು ಮಾತನಾಡಿ, ದೇವಸ್ಥಾನದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗಲು ಪ್ರತಿ 12 ವರ್ಷಕ್ಕೊಮ್ಮೆ ಬ್ರಹ್ಮಕಲಶೋತ್ಸವ ನಡೆಯಬೇಕಾಗಿದೆ. ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಎಲ್ಲರೂ ಒಟ್ಟಾಗಿ ಮುಂದಾಗಿರುವುದು ಶ್ಲಾಘನೀಯವಾಗಿದ್ದು, ತನು ಮನ ಧನದ ಸಹಕಾರದಿಂದ ಎಲ್ಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು.

ಆಡಳಿತ ಗೌರವಾಧ್ಯಕ್ಷ ರಾಜರತ್ನ ಸನಿಲ್ ಅವರು ಮಾತನಾಡಿ, ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಸಲಾದ ಪ್ರಶ್ನಾಚಿಂತನೆಯಲ್ಲಿ ದೇವರಿಗೆ ಬ್ರಹ್ಮಕಲಶ ನೆರವೇರಿಸುವಂತೆ ಸೂಚನೆ ಬಂದಿದೆ. ಅದಕ್ಕಾಗಿ ಸಮಿತಿ ರಚನೆ ಮಾಡಲಾಗಿದ್ದು, ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿದ ಮುಂದಿನ ಕೆಲಸಗಳು ಸಮಿತಿಯ ಪದಾಧಿಕಾರಿಗಳಿಂದ ನಡೆಯಲಿದೆ. ಈ ಮಹತ್ಕಾರ್ಯದಲ್ಲಿ ಸರ್ವರ ಸಹಕಾರದ ಅಗತ್ಯವಿದೆ ಎಂದರು.

ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಭಟ್, ದ.ಕ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಆಶಿಕ್ ನೋಂಡ, ಅಡ್ಯಾರ್‌ಪದವು ಕೋರ್ದಬ್ಬು ಪಂಜುರ್ಲಿ ದೇವಸ್ಥಾನದ ಅಧ್ಯಕ್ಷ ಮೋಹನ್ ಸಾಲ್ಯಾನ್, ಗುರಿಕಾರ ಕೋಟಿ ಗುರಿಕಾರ ಉಪಸ್ಥಿತರಿದ್ದರು.

ದಿನೇಶ್ ಬೆಳ್ಚಾಡ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗೌರವ್ ಶೆಟ್ಟಿ ವಂದಿಸಿದರು. ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಕ್ಷೇತ್ರದ ಭಕ್ತರು ಸಭೆಯಲ್ಲಿ ಭಾವಹಿಸಿದ್ದರು.