Gavel on desk. Isolated with good copy space. Dramatic lighting. 
ಜಿಲ್ಲೆ

ಅಪಘಾತ ಪ್ರಕರಣದಲ್ಲಿ ಮಿನಿ ಲಾರಿ ಚಾಲಕನಿಗೆ ಜೈಲು ಶಿಕ್ಷೆ

ಮಂಗಳೂರು : ಮಿನಿ ಲಾರಿ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟ ಪ್ರಕರಣದಲ್ಲಿ ನ್ಯಾಯಾಲಯವು ಅಪರಾಧಿ ಚಾಲಕನಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2020ರ ಡಿ.6ರಂದು ಹಳೆಯಂಗಡಿ ಜಂಕ್ಷನ್ ಬಳಿ ಮಿನಿ ಲಾರಿಯ ಚಾಲಕ ರಾಜೇಶ್ ಪೂಜಾರಿ ನಿರ್ಲಕ್ಷೃತನದಿಂದ ಚಲಾಯಿಸಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸುಖಲತಾ (45) ಅವರಿಗೆ ಢಿಕ್ಕಿ ಪಡಿಸಿದ್ದ. ಪರಿಣಾಮವಾಗಿ ಸುಖಲತಾ ಅವರು ಮೃತಪಟ್ಟಿದ್ದರು. ಅವರ ಜತೆ ಇದ್ದ ಬಾಲಕನ ತಲೆಗೆ ಗಂಭೀರ ಗಾಯವಾಗಿತ್ತು.

ವಿಚಾರಣೆ ನಡೆಸಿದ ಮೂಡುಬಿದಿರೆಯ ಸಿಜೆ ಮತ್ತು ಜೆಎಂಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪಿ ರಾಜೇಶ್ ಪೂಜಾರಿಗೆ ಐಪಿಸಿ ಕಲಂ 279ರಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ, 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 7 ದಿನಗಳ ಸಾದಾ ಕಾರಾಗೃಹವಾಸ, ಐಪಿಸಿ ಕಲಂ 338ರ ಅಡಿಯಲ್ಲಿ 6 ತಿಂಗಳ ಸಾದಾ ಕಾರಾಗೃಹವಾಸ, 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 7 ದಿನಗಳ ಸಾದಾ ಕಾರಾಗೃಹವಾಸ, ಐಪಿಸಿ ಕಲಂ 304(ಎ) ಅಡಿಯಲ್ಲಿ 2 ವರ್ಷಗಳ ಸಾದಾ ಕಾರಾಗೃಹವಾಸ, 5,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿಯಾಗಿ 30 ದಿನಗಳ ಸಾದಾ ಸಜೆ ವಿಧಿಸಿದ್ದಾರೆ.

ಠಾಣಾ ಪೊಲೀಸ್ ನಿರೀಕ್ಷಕರಾಗಿದ್ದ ಮೋಹನ್ ಕೊಟ್ಟಾರಿ ಅವರು ತನಿಖೆ ನಡೆಸಿದ್ದರು. ಸರ್ಕಾರದ ಪರವಾಗಿ ಅಭಿಯೋಜಕಿ ಶೋಭಾ ಎಸ್. ವಾದಿಸಿದ್ದರು. ಸಂಚಾರ ಉತ್ತರ ಠಾಣಾ ಪೊಲೀಸ್ ನಿರೀಕ್ಷಕ ಮಹಮ್ಮದ್ ಶರೀಫ್ ಕೆ.ಅವರು ಪ್ರಕರಣದ ವಿಚಾರಣೆ ಸಮಯ ಸಾಕ್ಷಿಗಳು ನ್ಯಾಯಾಲಯದಲ್ಲಿ ಹಾಜರಾಗುವಂತೆ ಮೇಲ್ವಿಚಾರಣೆ ನೋಡಿಕೊಂಡಿದ್ದರು. ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಮತ್ತು ಸಿಬಂದಿಗೆ ಪೊಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.