ವಿಜಯವಾಣಿ ಸುದ್ದಿಜಾಲ ಮಂಗಳೂರು
ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಬಾರೊಂದರಲ್ಲಿ ‘ಸ್ಟೂಡೆಂಟ್ಸ್ ವೆಡ್‌ನಸ್ಡೇ ನೈಟ್’ ಆಯೋಜಿಸಿ ವಿದ್ಯಾರ್ಥಿಗಳಿಗೆ ಮದ್ಯದ ನಶೆ ಏರಿಸಲು ಆಫರ್ ನೀಡಿದ ಬಾರ್ ಮಾಲೀಕರ ವಿರುದ್ಧ ಅಬಕಾರಿ ಇಲಾಖೆ ಪ್ರಕರಣ ದಾಖಲಿಸಿದೆ.
ಬಾರ್‌ನಲ್ಲಿ ಆಯೋಜಿಸಿದ್ದ ನೈಟ್ ಪಾರ್ಟಿಯ ಸ್ಟಿಕ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಪಾರ್ಟಿಗೆ ಕಾವೂರು ಪೊಲೀಸರು ತಡೆಯೊಡ್ಡಿ, ಬಾರ್ ಮಾಲೀಕನಿಗೆ ನೋಟಿಸ್ ನೀಡಿದ್ದರು. ಆ ಬಳಿಕ ಅಬಕಾರಿ ಇಲಾಖೆ ಎಚ್ಚೆತ್ತುಕೊಂಡು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ಸ್ಕೂಲ್ ಐಡಿ ತಂದರೆ ವಿದ್ಯಾರ್ಥಿಗಳಿಗೆ ಶೇ.15 ಆಫರ್ ನೀಡಲಾಗುತ್ತದೆ. ಅಲ್ಲದೆ, ವಿದ್ಯಾರ್ಥಿನಿಯರಿಗೆ ಐಡಿ ತೋರಿಸಿದರೆ ಫ್ರೀ ಶೂಟರ್ ವ್ಯವಸ್ಥೆ ಇದೆಯೆಂದು ಪಾರ್ಟಿ ಆಯೋಜಕರು ಆಫರ್ ನೀಡಿದ್ದರು. ಇದು ವಿದ್ಯಾರ್ಥಿಗಳನ್ನು ಮದ್ಯ ಸೇವನೆಗೆ ಪ್ರೋತ್ಸಾಹ ನೀಡಿದಂತಾಗಿದೆ ಎಂದು ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು.
ಕಾನೂನು ಪ್ರಕಾರ ಕರ್ನಾಟಕದಲ್ಲಿ 18 ವರ್ಷ ತುಂಬಿದವರು ಬಾರ್‌ನಲ್ಲಿ ಮದ್ಯ ಸೇವನೆ ನಿಷಿದ್ಧವಲ್ಲ. ಆದರೆ ಈ ಬಾರ್‌ನಲ್ಲಿ ನೇರವಾಗಿ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಆಮೂಲಕ ವಿದ್ಯಾರ್ಥಿಗಳೇ ಬಂದು ನಶೆ ಏರಿಸಿಕೊಳ್ಳಿ ಎಂದು ಬಾರ್ ಮಾಲೀಕನೇ ಯಾವುದೇ ಕಾನೂನು ಕಟ್ಟಳೆಗಳ ಭಯ ಇಲ್ಲದೆ ಆಫರ್ ನೀಡಿರುವುದು ವಿರೋಧಕ್ಕೆ ಕಾರಣವಾಗಿದೆ. ಮಂಗಳೂರಿನ ಕೆಲವು ಪಬ್ ಗಳಲ್ಲಿ ಮೆಡಿಕಲ್ ವಿದ್ಯಾರ್ಥಿಗಳಿಗೆ ಡಿಸ್ಕೌಂಟ್ ರೇಟ್ ಇದೆ. ಇದರ ನೆಪದಲ್ಲಿ ಈ ಬಾರ್‌ನಲ್ಲೂ ನೇರವಾಗಿ ವಿದ್ಯಾರ್ಥಿಗಳನ್ನು ಕುಡಿತಕ್ಕೆ ಆಹ್ವಾನಿಸಿದ್ದಾರೆ.
ದೇರೆಬೈಲ್‌ನ ಈ ಬಾರ್‌ಗೆ ಸಿಎಲ್- 7 ಮಾದರಿಯ ಲೈಸನ್ಸ್ ಇರುವುದೆಂದು ಅಬಕಾರಿ ಅಧಿಕಾರಿಗಳು ದಾಖಲಿಸಿರುವ ಎಫ್‌ಐಆರ್ ನಲ್ಲಿ ಉಲ್ಲೇಖವಾಗಿದೆ. ಸಿಎಲ್- 7 ಪ್ರಕಾರ, ಲಾಡ್ಜ್ ಇರುವ ಹೊಟೇಲ್ ಗಳಿಗೆ ಮಾತ್ರ ಈ ಲೈಸನ್ಸ್ ಕೊಡುವುದು. ಕಾರ್ಪೊರೇಶನ್ ವ್ಯಾಪ್ತಿಯಲ್ಲಿ ಕನಿಷ್ಠ 20 ಲಾಡ್ಜ್ ರೂಂಗಳಿದ್ದರೆ ಮಾತ್ರ ಈ ಮಾದರಿ ಲೈಸನ್ಸ್ ಸಿಗುತ್ತದೆ. ಅಲ್ಲಿ ಲಾಡ್ಜ್ ಗಳಿಗೆ ಬರುವ ಅತಿಥಿಗಳಿಗೆ ಮಾತ್ರ ಮದ್ಯ ಪೂರೈಸಲು ಅವಕಾಶ. ಇತರೇ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುವಂತಿಲ್ಲ. ಬಾರ್ ಗಳ ಮಾದರಿಯಲ್ಲಿ ಓಪನ್ನಾಗಿ ಸಾರ್ವಜನಿಕರಿಗೆ ಮದ್ಯ ಪೂರೈಸುವುದಕ್ಕೂ ಅವಕಾಶ ಇರುವುದಿಲ್ಲ.
ಆದರೆ ಈ ಬಾರ್‌ನಲ್ಲಿ ಸಾರ್ವಜನಿಕರಿಗೆ ಚಿಲ್ಲರೆ ಮದ್ಯ ಮಾರಾಟ ಮಾಡಲಾಗುತ್ತದೆ. ಇದಕ್ಕಾಗಿ 2 ಕೌಂಟರ್ ತೆರೆಯಲಾಗಿದೆ. ಬಾರ್ ಆ್ಯಂಡ್ ರೆಸ್ಟೋರೆಂಟ್ ರೀತಿಯಲ್ಲಿ ಫುಡ್ ಮತ್ತು ಮದ್ಯ ಪೂರೈಕೆಯೂ ಆಗುತ್ತದೆ. ಸಿಎಲ್- 9 ಮಾದರಿಯ ಲೈಸನ್ಸ್ ಪಡೆದಲ್ಲಿ ಮಾತ್ರ ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸಲು ಅವಕಾಶ ಇದೆ. ಮಂಗಳೂರಿನ ಹಲವೆಡೆ ಈ ರೀತಿ ಸಿಎಲ್-7 ಲೈಸನ್ಸ್ ಪಡೆದು ಬಾರ್ ಆ್ಯಂಡ್ ರೆಸ್ಟೋರೆಂಟ್ ನಡೆಸುತ್ತಿದ್ದಾರೆ.
ಕೇವಲ ವೈನ್ ಶಾಪ್ ಲೈಸನ್ಸ್ ಪಡೆದಿದ್ದರೂ ಹಿಂಭಾಗದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ರೀತಿಯಲ್ಲಿ ಆಹಾರ ಮತ್ತು ಮದ್ಯ ಪೂರೈಕೆ ಮಾಡುತ್ತಿರುವುದು ರಾಜಾರೋಷವಾಗಿ ಕಂಡು ಬರುತ್ತಿದೆ. ಇವೆಲ್ಲವೂ ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಗಮನದಲ್ಲಿದ್ದರೂ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ.