ಜಿಲ್ಲೆ

24 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ಹರೀಶ ಎಂ.

ಮಂಗಳೂರು: ನಗರದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಕ್ರಮ ಪ್ರವೇಶ, ಸೊತ್ತು ನಾಶ ಮತ್ತು ಜೀವ ಬೆದರಿಕೆ ಪ್ರಕರಣವೊಂದರಲ್ಲಿ ಭಾಗಿಯಾಗಿ 24 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮುಲ್ಕಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕಲ್ಲಗುಡ್ಡೆ ಎಂಬಲ್ಲಿನ ವಾಸಿ ಸುಧಾಕರ ಭಂಡಾರಿ ಬಂಧಿತ ಆರೋಪಿ. 2000 ಮಾರ್ಚ್ 22ರಂದು ಕಿಲ್ಪಾಡಿ ಗ್ರಾಮದ ನಿವಾಸಿಗಳಾದ ಆಶೋಕ ಮತ್ತು ಕಿಶೋರ್ ಕುಮಾರ್ ಎಂಬವರ ವಿರುದ್ಧ ಅಕ್ರಮ ಪ್ರವೇಶ ಮಾಡಿ ಕೃಷಿ ಕಡಿದು ನಾಶ ಮಾಡಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಪ್ರಕರಣ ದಾಖಲಾಗಿತ್ತು.

ಪ್ರಕರಣ ಮೂಡುಬಿದಿರೆ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಆರೋಪಿಯಾದ ಕಿಶೋರ್ ಕುಮಾರ್ ಎಂಬಾತನು ದುಬೈಗೆ ತೆರಳಿ ಅಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. 2-3 ಬಾರಿ ಮಂಗಳೂರಿಗೆ ಬಂದಿದ್ದ. ಈ ಬಾರಿ ಆತನ ಬಗ್ಗೆ ಮಾಹಿತಿ ಸಂಗ್ರಹಿಸಿ ಬಂಧಿಸಲಾಗಿದೆ.

ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಮತ್ತು ಮುಲ್ಕಿ ಠಾಣಾ ನಿರೀಕ್ಷಕರಾದ ವಿದ್ಯಾಧರ ಡಿ ಬಾಯ್ಕೇರಿಕರ್ ಅವರ

ನೇತೃತ್ವದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಪಿ.ಎಸ್.ಐ. ಅನಿತಾ ಹೆಚ್.ಬಿ. ಮತ್ತು ಕಾನ್‌ಸ್ಟೇಬಲ್‌ಗಳಾದ ವಾಸುದೇವಾ, ಸಂದೀಪ್ ಆರೋಪಿ ಪತ್ತೆ ಕಾರ‌್ಯದಲ್ಲಿ ಭಾಗವಹಿಸಿದ್ದರು.