Gavel on desk. Isolated with good copy space. Dramatic lighting. 
ಜಿಲ್ಲೆ

ಅಪ್ರಾಪ್ತೆ ಮೇಲೆ ಅತ್ಯಾಚಾರ ಆರೋಪ ಸಾಬೀತು ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 50 ಸಾವಿರ ರೂ. ದಂಡ

ಮಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಮೊಹಮ್ಮದ್ ಸಾದಿಕ್ (24) ಎಂಬಾತನ ವಿರುದ್ಧದ ಆರೋಪ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎ್.ಟಿ.ಎಸ್.ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆತನಿಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂ. ದಂಡ ವಿಧಿಸಿ ಆದೇಶ ನೀಡಿದೆ.

ಪ್ರಕರಣದ ವಿವರ:

ಬಂಟ್ವಾಳ ಸಜಿಪ ಮುನ್ನೂರು ನಂದಾವರ ಕೋಟೆ ಮನೆ ಮೂಲದ, ಬಂಟ್ವಾಳ ಬಿ ಮೂಡ ಗ್ರಾಮದ ಗೂಡಿನ ಬಳಿಯಲ್ಲಿ ವಾಸವಿದ್ದ ಮಹಮ್ಮದ್ ಸಾದಿಕ್, ಅಪ್ರಾಪ್ತ ಬಾಲಕಿಯನ್ನು ಮೊಬೈಲ್‌ನಲ್ಲಿ ಪರಿಚಯ ಮಾಡಿಕೊಂಡು ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. 2023ರಲ್ಲಿ ಬಾಲಕಿಯ ತಾಯಿ ಅನಾರೋಗ್ಯದಲ್ಲಿದ್ದಾಗ ಮನೆಗೆ ಹೋದ ಆತ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಅದರ ನಂತರವೂ ಮನೆಯಲ್ಲಿ ಯಾರೂ ಇಲ್ಲದಿರುವ ಸಮಯದಲ್ಲಿ ಮನೆಗೆ ಹೋಗಿ ಅತ್ಯಾಚಾರ ನಡೆಸುತ್ತಿದ್ದ. ಇದರಿಂದಾಗಿ ಬಾಲಕಿ ಗರ್ಭವತಿಯಾಗಿದ್ದು, ಈ ಬಗ್ಗೆ ಬಾಲಕಿ ತಾಯಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು.

ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ಕೆ.ವಿ.ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ನಡುವೆ ನೊಂದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎ್.ಟಿ.ಎಸ್.ಸಿ-2 ಪೋಕ್ಸೊ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 20 ಸಾಕ್ಷಿದಾರರನ್ನು ವಿಚಾರಣೆ ನಡೆಸಲಾಗಿದೆ. ಆರೋಪಿಯು ತನ್ನ ಮೇಲಿನ ಆರೋಪವನ್ನು ನಿರಾಕರಿಸುತ್ತಾ ಬಂದಿದ್ದು, ಅನಂತರ ಮಗುವಿನ ಡಿ.ಎನ್.ಎ ಪರೀಕ್ಷಾ ವರದಿಯಲ್ಲಿ ಸಾದಿಕ್ ಮಗುವಿನ ಜೈವಿಕ ತಂದೆ ಎಂದು ವರದಿ ಬಂದಿದೆ.

ಈ ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿಯ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ಜ.25ರಂದು ನ್ಯಾಯಾಧೀಶರಾದ ಮಾನು ಕೆ. ಎಸ್. ಅವರು ಆತನಿಗೆ ಅತ್ಯಾಚಾರ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆಯ ಕಲಂ: 376(3), 376(2)(ಎನ್) ಮತ್ತು ಕಲಂ: 6 ಪೋಕ್ಸೊ ಕಾಯ್ದೆಯಂತೆ 20 ವರ್ಷಗಳ ಕಾಲ ಕಠಿಣ ಶಿಕ್ಷೆ ಮತ್ತು 50,000 ರೂ.ದಂಡ ವಿಧಿಸಿದ್ದಾರೆ. ದಂಡದ ಮೊತ್ತವನ್ನು ನೊಂದ ಬಾಲಕಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ದಂಡ ಪ್ರಕ್ರಿಯೆ ಸಂಹಿತೆಯ ಕಲಂ: 357(ಎ) ಪ್ರಕಾರ ಮತ್ತು ಸಂತ್ರಸ್ಥರ ಪರಿಹಾರ ಯೋಜನೆ ಅಡಿಯಲ್ಲಿ ನೊಂದ ಬಾಲಕಿಗೆ ಹೆಚ್ಚುವರಿಯಾಗಿ 6,50,000 ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದ್ದಾರೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಬದರಿನಾಥ ನಾಯರಿ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದಾರೆ.