Gavel on desk. Isolated with good copy space. Dramatic lighting. 
ಜಿಲ್ಲೆ

ವಾಹನ ಅಪಘಾತ 1.35 ಕೋಟಿ ರೂ. ಪರಿಹಾರ ನೀಡಲು ಆದೇಶ

ಮಂಗಳೂರು: ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಆಶ್ರಿತರಿಗೆ 1.35 ಕೋಟಿ ರೂಪಾಯಿ ಪರಿಹಾರ ನೀಡಲು ವಿಮಾ ಕಂಪನಿಗೆ ಆದೇಶಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಲಕ್ಷ್ಮೀ ಜಿ.ಎಂ. ತೀರ್ಪು ನೀಡಿದ್ದಾರೆ.


ಪಣಂಬೂರಿನ ಎಂಸಿಎ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, 2018ನೇ ಮೇ 18ರಂದು ಮಹೇಶ್ ಭಟ್ ಎಂಬವರು ತನ್ನ ಮೋಟಾರು ಬೈಕ್‌ನಲ್ಲಿ ಕರ್ತವ್ಯಕ್ಕೆ ಹೋಗುತ್ತಿದ್ದಾಗ ಮಂಗಳೂರಿನ ಕೊಟ್ಟಾರ ಚೌಕಿ ಬಳಿ ರಾಜಸ್ಥಾನದ ನೋಂದಣಿಯ ಲಾರಿಯೊಂದು ಡಿಕ್ಕಿ ಹೊಡೆದಿತ್ತು. ಈ ಘಟನೆಯಲ್ಲಿ ಮಹೇಶ್ ಭಟ್ ಮೃತಪಟ್ಟಿದ್ದರು. ಅದರಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯಿದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ಪ್ರತಿವಾದಿ ವಿಮಾ ಸಂಸ್ಥೆ ಯುನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಬಹಳಷ್ಟು ವಾದಗಳನ್ನು ಮಾಡಿತ್ತು.

ಕೊನೆಗೆ ನ್ಯಾಯಾಲಯವು ಅರ್ಜಿದಾರರು ಹಾಜರು ಪಡಿಸಿದ ದಾಖಲಾತಿಗಳು ಹಾಗೂ ಮಂಡಿಸಿದ ವಾದ-ವಿವಾದಗಳನ್ನು ಪರಿಗಣಿಸಿ 1 ಕೋಟಿ 6 ಲಕ್ಷ ರೂ.ಗಳ ಪರಿಹಾರವನ್ನು ಶೇ.6ರಷ್ಟು ಬಡ್ಡಿಯೊಂದಿಗೆ ಸೇರಿಸಿ ಒಟ್ಟು 1.35ಕೋಟಿ ರೂ.ಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಲು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ.
ಪರಿಹಾರ ಧನ ಪಡೆಯಲು ಮೃತರ ಪತ್ನಿ, ಅವರ ಪುತ್ರ ಹಾಗೂ ಮೃತರ ಹೆತ್ತವರು ಅರ್ಹರಾಗಿದ್ದಾರೆಂದು ನ್ಯಾಯಾಲಯವು ತಿಳಿಸಿದೆ.
ಅರ್ಜಿದಾರರ ಪರವಾಗಿ ವಕೀಲರಾದ ಎ. ದಿನೇಶ್ ಭಂಡಾರಿ, ಕೆ.ಎಸ್.ಎನ್.ಅಡಿಗ, ಪ್ರೀತಿಕಾ ಕೆ.ಎಂ. ಹಾಗೂ ತೃಪ್ತಿರವರು ವಾದಿಸಿದ್ದರು.