ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣ ದಸರಾ ಪ್ರಯುಕ್ತ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ನಮ್ಮ ಜಿಲ್ಲೆಯವರೇ ಆಗಬೇಕಿದ್ದು, ಅಗತ್ಯ ದಾಖಲೆಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನ್‌ಮುಲ್ ನಿರ್ದೇಶಕ ಬಿ.ಬೋರೇಗೌಡ ತಿಳಿಸಿದರು.
ಪುರಸಭಾ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನ ಮತ್ತು ಪಶುವೈದ್ಯ ಸೇವಾ ಇಲಾಖೆ ಹಾಗೂ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಶ್ರೀರಂಗಪಟ್ಟಣ ದಸರಾ-2026ನೇ ಸಾಲಿನ ಜಿಲ್ಲಾ ಮಟ್ಟದ ಅಧಿಕ ಹಾಲು ಕರೆಯುವ ಸ್ಪರ್ಧೆಯ ಪೋಸ್ಟರ್ ಅನ್ನು ತಾಲೂಕು ಆಡಳಿತ ವತಿಯಿಂದ ಬಿಡುಗಡೆಗೊಳಿಸಿ ಮಾತನಾಡಿದರು.
ತಾಲೂಕು ಸೇರಿದಂತೆ ಜಿಲ್ಲೆಯ ಹಾಲು ಒಕ್ಕೂಟದ ಎಲ್ಲ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಚೇರಿಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಾಲು ಕರೆಯುವ ಸ್ಪರ್ಧೆಯ ಮಾಹಿತಿ ಹಾಲು ಉತ್ಪಾದಕರಿಗೆ ಸಕಾಲಕ್ಕೆ ತಲುಪುವಂತೆ ಪೋಸ್ಟರ್ ಅಂಟಿಸಲು ಹಾಗೂ ಪ್ರಚಾರಕ್ಕೆ ಕ್ರಮವಹಿಸಿ. ವಿಜೇತ ಸ್ಪರ್ಧಿಗಳಿಗೆ ಪ್ರಥಮ ಬಹುಮಾನ ಮತ್ತು ಟ್ರೋಫಿಯೊಂದಿಗೆ 50 ಸಾವಿರ ರೂ., ದ್ವಿತೀಯ ಬಹುಮಾನ 30 ಸಾವಿರ ರೂ. ಮತ್ತು ಟ್ರೋಫಿ, ತೃತೀಯ ಬಹುಮಾನ 20 ಸಾವಿರ ರೂ.ಟ್ರೋಫಿ ಹಾಗೂ ಸಮಾಧಾನಕರ ಬಹುಮಾನವಾಗಿ 10 ಸಾವಿರ ರೂ.ನೀಡಲಾಗುತ್ತಿದೆ ಎಂದರು.
ಪಶುವೈದ್ಯಕೀಯ ಇಲಾಖೆಯ ತಾಲೂಕು ನಿರ್ದೇಶಕ ಡಾ.ಪ್ರವೀಣ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸುವ ಹಸುವಿನ ಮಾಲೀಕರು ಕಡ್ಡಾಯವಾಗಿ ಮಂಡ್ಯ ಜಿಲ್ಲೆಯವರೇ ಆಗಬೇಕಿದ್ದು, ಶ್ರೀರಂಗಪಟ್ಟಣದ ತಾಲೂಕು ಪಶು ಆಸ್ಪತ್ರೆಯ ಕಚೇರಿಯಲ್ಲಿ ಅ.8ರಿಂದ ಬೆಳಗ್ಗೆ 10ರಿಂದ ಸಂಜೆ 4ರ ಒಳಗೆ ಹಾಗೂ ಅ.14ರ ಬೆಳಗ್ಗೆ 10ರ ಒಳಗಾಗಿ ಆಧಾರ್ ಕಾರ್ಡ್, ತಮ್ಮ ಭಾವಚಿತ್ರದೊಂದಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಉಚಿತ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದರು.
ತಹಸೀಲ್ದಾರ್ ಚೇತನಾ ಯಾದವ್ ಮಾತನಾಡಿ, ತಾಲೂಕನ್ನು ಬರಪಟ್ಟಿಯಲ್ಲಿ ಸೇರ್ಪಡೆಗೊಳಿಸಿದ್ದು, ಕ್ಷೇತ್ರವ್ಯಾಪ್ತಿಯಲ್ಲಿ ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಎಲ್ಲ 21ಪಂಚಾಯಿತಿ ವ್ಯಾಪ್ತಿಯಲ್ಲೂ ಪಶು ಇಲಾಖೆ ಅಧಿಕಾರಿಗಳು, ಕೃಷಿ ಸಖಿ, ಪಶು ಸಖಿ ಹಾಗೂ ಪಿಡಿಒಗಳೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಿ, ಜಾನುವಾರುಗಳ ಕುಡಿಯುವ ನೀರು ತೊಟ್ಟಿ ಸ್ವಚ್ಛತೆ, ನೀರು ನಿರ್ವಹಣೆ ಬಗ್ಗೆ ಎಚ್ಚರ ವಹಿಸುವ ಜತೆಗೆ ಸರ್ಕಾರಿ ಭೂಮಿಗಳಲ್ಲೂ ಮೇವು ಬೆಳೆಯಲು ಅನೂಕೂಲ ಕಲ್ಪಿಸಿ ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಮೇವು ಬ್ಯಾಂಕ್ ಸ್ಥಾಪಿಸುವಂತೆ ಸಭೆಯಲ್ಲಿ ಅಧಿಕಾರಿ, ಸಿಬ್ಬಂದಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಹಾಯಕ ಕೃಷಿ ಅಧಿಕಾರಿ ಪ್ರಿಯದರ್ಶಿನಿ, ಪಶುವೈದ್ಯಕೀಯ ಇಲಾಖೆಯ ವೈದ್ಯರು ಹಾಗೂ ಕೃಷಿ ಇಲಾಖೆ ಸಿಬ್ಬಂದಿ ಹಾಜರಿದ್ದರು.