ಹಲಗೂರು: ಸಮಯ ಅಮೂಲ್ಯ ಆಗಿದ್ದು, ಕಾಲ ವ್ಯಯ ಮಾಡದೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸಜ್ಜಾಗಿ ಎಂದು ಹಲಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಂ.ಸಿ.ಜೈಶಂಕರ್ ಕರೆ ನೀಡಿದರು.
ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಪದವಿ ನಂತರ ಹಲವಾರು ಕ್ಷೇತ್ರಗಳಲ್ಲಿ ವಿಪುಲ ಅವಕಾಶಗಳಿವೆ. ಬೇಜವಾಬ್ದಾರಿ ತೋರದೆ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಾಗಲಿದೆ. ಗೆದ್ದಾಗ ಹಿಗ್ಗದೆ, ಸೋತಾಗ ಕುಗ್ಗದೆ ನಿರಂತರ ಪ್ರಯತ್ನದಿಂದ ಸಾಧನೆ ಮಾಡಲು ಮುಂದಾಗಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಎನ್.ಎಸ್.ಶಂಕರೇಗೌಡ ಮಾತನಾಡಿ, ವಿದ್ಯಾರ್ಥಿಗಳಿಗೆ ಕೇವಲ ಪಠ್ಯ ಅಷ್ಟೇ ಸಾಲದು, ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡಬೇಕಿದೆ. ಕಲೆ, ಹಾಡು, ನೃತ್ಯ ವಿವಿಧ ಪ್ರಕಾರಗಳು ಮನುಷ್ಯನನ್ನು ಸಂವೇದನಾ ಲೋಕಕ್ಕೆ ಕರೆದೊಯ್ದು, ಮನಸ್ಸನ್ನು ಮುದಗೊಳಿಸಿ ಸಂತೃಪ್ತಿಗೊಳಿಸಲಿವೆ. ವಿದ್ಯಾರ್ಥಿಗಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆಯೋ, ಅದನ್ನು ಗುರುತಿಸಿ ವಿವಿಧ ಕ್ಷೇತ್ರದಲ್ಲಿ ಬೆಳೆಯಲು ಸೂಕ್ತ ವಾತಾವರಣ ಕಲ್ಪಿಸಲು ಇಂತಹ ವೇದಿಕೆಗಳು ಸಹಕಾರಿಯಾಗಲಿವೆ ಎಂದರು.
ಕ್ರೀಡಾ ಸಂಚಾಲಕ ಟಿ.ಶ್ರೀನಿವಾಸ್, ಸಾಂಸ್ಕೃತಿಕ ಸಂಚಾಲಕಿ ಸೀಮಾ ಕೌಸರ್, ಐಕ್ಯೂಎಸಿ ಸಂಚಾಲಕಿ ತಾರ ಜಯಲಕ್ಷ್ಮೀ, ಎನ್.ಎಸ್.ಎಸ್ ಸಂಚಾಲಕ ಬಿ.ಸಿ.ರವಿ, ಗುರುಪ್ರಸಾದ್, ಸೂಪರಿಂಟೆಂಡೆಂಟ್ ಕುಮಾರಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.