ಕಿಕ್ಕೇರಿ: ದೀಪಾವಳಿ ಹಬ್ಬದ ಅಂಗವಾಗಿ ಹೋಬಳಿಯ ಸಾಸಲು ಗ್ರಾಮದಲ್ಲಿ ಮಾಣಿಕಶೆಟ್ಟಿ(ಕತ್ತೆ) ಹಬ್ಬ ಜರುಗಿತು.
ಗ್ರಾಮವಲ್ಲದೆ ದೂರದ ಹತ್ತಾರು ಹಳ್ಳಿ, ಜಿಲ್ಲೆಯ ವಿವಿಧ ಮೂಲೆಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಶಿವಭಕ್ತ ಭೈರವರಾಜರು ದೀಪಾವಳಿಯ ಬಲಿಪಾಡ್ಯಮಿಯಂದು ಸ್ವರ್ಗಾರೋಹಣವಾದ ನೆನಪಿನ ದಿನದಲ್ಲಿ ಗ್ರಾಮದಲ್ಲಿ ಈ ಹಬ್ಬ ವಿಜೃಂಭಣೆಯಿಂದ ಆಚರಿಸುವುದು ವಾಡಿಕೆ.
ಜಂಗಮ ಸಮುದಾಯದ ಬಾಲಕನನ್ನು ಶಿವನ ವೇಷದಲ್ಲಿ ಮೆರವಣಿಗೆ ಸಜ್ಜುಗೊಳಿಸಲಾಯಿತು. ಸೋಮೇಶ್ವರ ದೇವರ ಮುಂದೆ ಬಾಲಕನನ್ನು ಕೂರಿಸಿ ಆರತಿ ಬೆಳಗಿದರು. ಇಜ್ಜಲು ಮಸಿಯ ಮೀಸೆ, ತೆಂಗಿನ ಗರಿಯ ಟೋಪಿ, ಸೋಗೆ ಗರಿಯ ಸೊಂಟ ಪಟ್ಟಿ, ಬಣ್ಣ ಬಣ್ಣದ ವಸ್ತ್ರಗಳನ್ನು ತೊಡಿಸಿದರು. ನೆರಳಿಗೆ ಚಾಮರದಂತೆ ಹಳೆಯ ಮೊರವನ್ನು ಕಟ್ಟಲಾಯಿತು. ಶಿವನ ವಾಹನವಾಗಿ ಮಾಣಿಕಶೆಟ್ಟಿ(ಕತ್ತೆ) ತರಲಾಯಿತು.
ದೇಗುಲದ ದ್ವಾರಬಾಗಿಲು ಮುಂದೆ ಸೋಮೇಶ್ವರ ಮೂರ್ತಿಗೆ, ಶಿವನ ಅವತಾರದಲ್ಲಿದ್ದ ಬಾಲಕನಿಗೆ ಆರತಿ ಬೆಳಗಲಾಯಿತು. ಬಾಲಾಲಯ ಗುಡಿಯ ಸುತ್ತ ಮಾಣಿಕಶೆಟ್ಟಿಯ ಮೇಲೆ ಪ್ರದಕ್ಷಿಣೆ ಹಾಕಿಸಿ ಗರುಡಗಂಭದ ಮುಂದೆ ಅಗ್ರ ಪೂಜೆ ಸಲ್ಲಿಸಲಾಯಿತು.
ಮಂಗಳವಾದ್ಯ, ತಮಟೆ ನಾದದೊಂದಿಗೆ ಗುಡಿಯಿಂದ ಹೊರ ನಡೆದ ಮೆರವಣಿಗೆ ಕಲ್ಯಾಣಿ, ರಥಬೀದಿ, ರಂಗಸ್ಥಳ, ಭೈರವರಾಜರ ಮಂದಿರದೆಡೆಗೆ ಸಾಗಿತು. ಕುದುರೆಮಂಡಮ್ಮ ದೇವಿಯ ಗುಡಿಯ ಬಳಿ ಬಾಲಕ ಶಿವನಿಗೆ ಆರತಿ ಬೆಳಗಿ ಅಂತಿಮವಾಗಿ ರಂಗಸ್ಥಳದತ್ತ ಮೆರವಣಿಗೆ ಸಾಗಿತು. ಅರ್ಚಕ ಸಮುದಾಯದವರು ಒಟ್ಟಿಗೆ ಸೇರಿ ಬಾಲಕ ಶಿವನಿಗೆ ಆರತಿ ಬೆಳಗುವುದರೊಂದಿಗೆ ಹಬ್ಬಕ್ಕೆ ತೆರೆ ಬಿದ್ದಿತು. ತೀರ್ಥ ಪ್ರೋಕ್ಷಣೆ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ನೀಡಲಾಯಿತು.