ನಾಗಮಂಗಲ: ಶಕ್ತಿ ಯೋಜನೆ ಜಾರಿ ಆದಾಗಿನಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿದ್ದು, ದುಡ್ಡು ನೀಡಿ ಪ್ರಯಾಣಿಸುವ ಪುರುಷರಿಗೆ ಬಸ್ನಲ್ಲಿ ಸೀಟು ಸಿಗದಂತಾಗಿದೆ. ಹಾಗಾಗಿ ಬಸ್ನಲ್ಲಿ ಪುರುಷರಿಗೆ ಇಂತಿಷ್ಟು ಸೀಟು ಮೀಸಲುಗೊಳಿಸುವಂತೆ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ದಿನೇಶ್ ಒತ್ತಾಯಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಮೂಡ್ಲಿಗೌಡ ಅಧ್ಯಕ್ಷತೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ನಾಗಮಂಗಲದಿಂದ ಬೆಂಗಳೂರು, ಮೈಸೂರು, ಶಿವಮೊಗ್ಗವರೆಗೂ ಪುರುಷರು ದುಡ್ಡು ಕೊಟ್ಟು ಪ್ರಯಾಣಿಸಿದರು ಬಸ್ಗಳಲ್ಲಿ ಸೀಟು ಸಿಗದೆ ನಿಂತುಕೊಂಡೇ ಪ್ರಯಾಣಿಸುವ ಪರಿಸ್ಥಿತಿ ಇದೆ. ವಯೋವೃದ್ಧರು, ಅನಾರೋಗ್ಯರು ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವುದು ನರಕಯಾತನೆಯಾಗಿದೆ. ಮಹಿಳೆಯರಿಗೆ ಇಂತಿಷ್ಟು ಸೀಟುಗಳು ಹಾಗೂ ಪುರುಷರಿಗೆ ಇಂತಿಷ್ಟು ಸೀಟುಗಳು ಎಂದು ನಿಗದಿಪಡಿಸುವುದು ಅಗತ್ಯವಿದೆ. ಈ ಬಗ್ಗೆ ರಾಜ್ಯ ಗ್ಯಾರಂಟಿ ಸಮಿತಿಗೆ ಪತ್ರ ಬರೆದು ಸರ್ಕಾರದ ಗಮನಕ್ಕೆ ತರುವಂತಹ ಕೆಲಸವಾಗಲಿ ಎಂದು ಸಭೆಯಲ್ಲಿ ಒತ್ತಾಯಿಸಿದರು.
ಈ ವಿಚಾರಕ್ಕೆ ಇತರೆ ಸದಸ್ಯರು ಹಾಗೂ ಅಧ್ಯಕ್ಷರು ಕೂಡ ಸಹಮತ ವ್ಯಕ್ತಪಡಿಸಿ ಈ ಸಮಸ್ಯೆಯಿರುವುದು ಸತ್ಯ ಈ ಬಗ್ಗೆ ಸಭಾ ನಡವಳಿಯಲ್ಲಿ ನಮೂದಿಸಿ ಸರ್ಕಾರದ ಗಮನ ಸೆಳೆಯಲು ಪತ್ರ ಬರೆಯಲಾಗುವುದು ಎಂದು ಅಧ್ಯಕ್ಷ ಮೂಡ್ಲೀಗೌಡ ಸಭೆಯಲ್ಲಿ ತಿಳಿಸಿದರು.
ಪಡಿತರ ವಿತರಣೆ ವಿಳಂಬವಾಗದಿರಲಿ: ಪಡಿತರ ವಿತರಣೆಯು ಗ್ರಾಹಕರಿಗೆ ಸರಿಯಾದ ಸಮಯಕ್ಕೆ ಸಿಗದೆ ವಿಳಂಬವಾಗುತ್ತಿದೆ. ತಿಂಗಳ ಕೊನೆಯ ವಾರದಲ್ಲಿ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುತ್ತಿದ್ದು, ನ್ಯಾಯಬೆಲೆ ಅಂಗಡಿ ಮಾಲೀಕರು ಆ ತಿಂಗಳ ಅಂತ್ಯದೊಳಗೆ ಪಡಿತರ ವಿತರಣೆ ಮಾಡಬೇಕಿದೆ. ತಿಂಗಳ ಅಂತ್ಯದೊಳಗೆ ವಿತರಣೆ ಮಾಡದಿದ್ದರೆ ಮುಂದಿನ ತಿಂಗಳಿನ ಲೆಕ್ಕಕ್ಕೆ ಸೇರಿಕೊಳ್ಳಲಿದೆ. ಇದರಿಂದ ಅನೇಕ ಗ್ರಾಹಕರಿಗೆ ಪಡಿತರ ಅಕ್ಕಿ ಸಿಗದಂತಾಗಿದೆ. ಕೆಲವು ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆಯಿದ್ದು ಅಂತಹ ಕಡೆಗಳಲ್ಲಿ ಇಬ್ಬರು ಕಂಪ್ಯೂಟರ್ ಆಪರೇಟರ್ಗಳನ್ನು ನಿಯೋಜಿಸಿಕೊಂಡು ಪಡಿತರ ವಿತರಣೆ ಮಾಡುವಂತೆ ಅಧ್ಯಕ್ಷ ಮೂಡ್ಲೀಗೌಡ ಆಹಾರ ನಿರೀಕ್ಷಕ ಅನಿಲ್ ಅವರಿಗೆ ಸೂಚಿಸಿದರು.
ಪಡಿತರ ಅಕ್ಕಿ ಮಾರಾಟಕ್ಕೆ ಕಡಿವಾಣ: ಪಡಿತರ ಅಕ್ಕಿಯನ್ನು ಗ್ರಾಹಕರು ಮಾರಾಟ ಮಾಡುತ್ತಿರುವುದು ತಾಲೂಕಿನಲ್ಲಿ ಹೆಚ್ಚಾಗುತ್ತಿದೆ. ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಿ ಮಾರಾಟ ಮಾಡುವವರು ಹಾಗೂ ಖರೀದಿಸುವವರ ವಿರುದ್ಧ ಕಾನೂನು ಕ್ರಮಜರುಗಿಸಲಿ. ಇದುವರೆಗೂ ಅಕ್ಕಿಯನ್ನು ಕೊಂಡುಕೊಳ್ಳುವವರ ವಿರುದ್ಧವಷ್ಟೆ ಕ್ರಮಜರುಗಿಸಲಾಗುತ್ತಿದೆ. ಸರ್ಕಾರದಿಂದ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ಪಡೆದು ಮಾರಾಟ ಮಾಡುವ ಮೂಲಕ ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಗ್ರಾಹಕರನ್ನು ವಿಶೇಷ ತಂಡ ರಚಿಸಿ ಪತ್ತೆಹಚ್ಚಿ ಅಂತವರ ಕಾರ್ಡ್ಗಳನ್ನು ರದ್ದುಪಡಿಸುವ ಕೆಲಸ ಮಾಡಿ ಎಂದು ಅಧ್ಯಕ್ಷ ಮೂಡ್ಲೀಗೌಡ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಗೃಹಲಕ್ಷ್ಮೀ, ಯುವನಿಧಿ, ಗೃಹಜ್ಯೋತಿ ಯೋಜನೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ಯೋಜನಾಧಿಕಾರಿ ಸಂದೀಪ್, ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಮಹೇಶ್, ಆಹಾರ ನಿರೀಕ್ಷಕ ಅನಿಲ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರಾದ ನೀಲಾಮೂರ್ತಿ, ಧನರಾಜ್, ತಮ್ಮಣ್ಣಗೌಡ, ಗೀತಾರಾಜು, ನವೀನ್ ಇದ್ದರು.