ಪಾಂಡವಪುರ ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಂ.ಪಿ.ಶಾಮಲಾ ಉದ್ಘಾಟಿಸಿದರು. ಡಾ.ನಿಶಾಂತ್ ಎ.ನಾಯ್ಡು, ಎಸ್.ಪೂಜಾ ಇತರರು ಇದ್ದರು. 
ಮಂಡ್ಯ

ಸಾಧಕ ಮಹಿಳೆರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡು ಖುಷಿ

ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ

ಪಾಂಡವಪುರ: ತಾಲೂಕಿನ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಘಟಕ ಮತ್ತು ಆತಂರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಐಐಸಿ ವತಿಯಿಂದ ಯಶಸ್ವಿ ಮಹಿಳೆಯರೊಂದಿಗೆ ಸೆಲ್ಫಿ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮ್ಯಾರಥಾನರ್ ಎಂ.ಪಿ.ಶಾಮಲಾ ಮಾತನಾಡಿ, ಸಾಧನೆ ಸಾಧಕರ ಸ್ವತ್ತು. ಎಷ್ಟೋ ಮಹಿಳಾ ಸಾಧಕರು ಎದುರಾಗುವ ಅನೇಕ ಕಷ್ಟಗಳನ್ನು ಸಹಿಸಿ ಸಾಧನಾ ಶಿಖರದ ಉತ್ತುಂಗ ತಲುಪಿರುವ ನಿದರ್ಶನ ಕಣ್ಣ ಮುಂದೆ ಇದೆ. ವಿದ್ಯಾರ್ಥಿಗಳೂ ಆತ್ಮವಿಶ್ವಾಸದೊಂದಿಗೆ ಸಾಧನೆಯಲ್ಲಿ ತೊಡಗಿಕೊಂಡಾಗ ನಿರೀಕ್ಷಿತ ಗುರಿ ಮುಟ್ಟಬಹುದು ಎಂದರು.

ಕಾರ್ಯಕ್ರಮದ ಬಳಿಕ ಆಯೋಜಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳು ಕೇಳಿದ ಅನೇಕ ಪ್ರಶ್ನೆಗಳಿಗೆ ಉದಾಹರಣೆ ಸಮೇತ ಉತ್ತರ ನೀಡಿ ವಿದ್ಯಾರ್ಥಿಗಳಲ್ಲಿದ್ದ ಗೊಂದಲ ಪರಿಹರಿಸಿದರು. ಬಳಿಕ ವಿದ್ಯಾರ್ಥಿನಿಯರು ಸಾಧಕ ಮಹಿಳೆಯರೊಂದಿಗೆ ಸೆಲ್ಫಿ ಕ್ಲಿಕಿಸಿಕೊಂಡರು.

ಕಾಲೇಜು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜೀವನ ಶೈಲಿ ಹಾಗೂ ಆಹಾರ ಅಭ್ಯಾಸ ದಲ್ಲಿ ಸ್ಥಳೀಯ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಪಾಶ್ಚಾತ್ಯ ಸಂಸ್ಕೃತಿ ಮತ್ತು ಆಹಾರ ಪದ್ಧತಿ ಸಾಧನೆಗೆ ಮಾರಕ. ಪರ್ವತಾರೋಹಿ ಶಾಮಲಾ ಅವರು ಇಳಿ ವಯಸ್ಸಿನಲ್ಲೂ ಸಾಧನೆಗೆ ಹಪಹಪಿಸುತ್ತಿದ್ದಾರೆ. ಅವರ ಸಾಧನೆ ಕಿರಿಯರಿಗೆ ದಾರಿ ದೀಪವಾಗಲಿದೆ ಎಂದರು.

ಇದೇ ವೇಳೆ ಕಾರ್ಯಕ್ರಮ ಆಯೋಜನೆಗೆ ಅನುವು ಮಾಡಿಕೊಟ್ಟ ಎಸ್‌ಟಿಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು ಅವರಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ತನ್ವಿಯಾಕೌಸರ್, ಪ್ರಾಧ್ಯಾಪಕರಾದ ಎಸ್.ಪೂಜಾ, ಸಸ್ಯಶಾಸ್ತ್ರ ಮುಖ್ಯಸ್ಥಕಿ ಬಿ.ಐಶ್ವರ್ಯಾ, ಮಹಿಳಾ ಘಟಕ ಸಂಯೋಜಕಿ ಬಿ.ವಿ.ರೇಖಾ ಇತರರು ಇದ್ದರು.