ಮದ್ದೂರು: ದಾನಿಗಳು, ಸಂಘ ಸಂಸ್ಥೆಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಉಳಿವಿಗೆ ಮುಂದಾಗಬೇಕೆಂದು ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಕೆ.ಆರ್.ರವಿ ಮನವಿ ಮಾಡಿದರು.
ತಾಲೂಕಿನ ಕೋಣಸಾಲೆಯ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಗುರುವಾರ ಉಚಿತ ಬೈಸಿಕಲ್ ಹಾಗೂ ಜರ್ಕಿನ್‌ಗಳನ್ನು ವಿತರಣೆ ಮಾಡಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿದ ಹಲವಾರು ವ್ಯಕ್ತಿಗಳು ಸಾಧನೆ ಮಾಡಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕು ಎಂದರು.
ಪ್ರಸ್ತುತ ಹಲವಾರು ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿರುವುದು ವಿಪರ್ಯಾಸ. ಇದನ್ನರಿತು ದಾನಿಗಳು, ಸಂಘ ಸಂಸ್ಥೆಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ಕೆ.ಕೆ.ಕುಮಾರ್ ಅವರು ವಿದ್ಯಾಥಿಗಳಿಗೆ ಸ್ವಂತ ಹಣದಲ್ಲಿ ಉಚಿತವಾಗಿ 30 ಸಾವಿರ ರೂ. ಮೌಲ್ಯದ ನೋಟ್‌ಬುಕ್‌ಗಳನ್ನು ವಿತರಣೆ ಮಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೆ.ಆರ್.ಚಂದ್ರಶೇಖರ್, ಪೋಸ್ಟ್ ಆಫೀಸ್ ರವಿ, ಮುಖಂಡರಾದ ಗುಡ್ಡಪ್ಪ ಪುಟ್ಟಸ್ವಾಮಿ, ಮಂಜು, ಕೃಷ್ಣ, ಮಹೇಶ್, ಮುಖ್ಯ ಶಿಕ್ಷಕ ವೆಂಕಟರಾಮಪ್ಪ, ಶಿಕ್ಷಕರಾದ ರವಿ, ಸುರೇಶ್, ಶಿಲ್ಪಾ, ವೇದ ಇತರರಿದ್ದರು.