ಕಿಕ್ಕೇರಿ : ಒತ್ತಡದ ಬದುಕಿನಲ್ಲಿ ದೇವರು, ಧರ್ಮ ಮಾರ್ಗದಲ್ಲಿ ಸಾಗುವುದರಿಂದ ಮಾನಸಿಕ ನೆಮ್ಮದಿ ಸಿಗಲಿದೆ ಎಂದು ಮಳವಳ್ಳಿಯ ಸಿದ್ದರಾಮೇಶ್ವರ ಪೀಠದ ಸದ್ಗುರು ಡಾ. ಮಾದೇಶ್ ಗುರೂಜಿ ಹೇಳಿದರು.
ಸಮೀಪದ ತೇಗನಹಳ್ಳಿ ಗ್ರಾಮದಲ್ಲಿ ಕೋಣಮ್ಮ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕೋಣಮ್ಮ ಲಕ್ಷ್ಮೀದೇವಿಯ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾದ ದೇಗುಲ ಉಳಿಸಿ, ಬೆಳೆಸುವುದು ಎಲ್ಲರ ಕರ್ತವ್ಯ. ನಮ್ಮ ಕಷ್ಟ- ಸುಖಗಳನ್ನು ನಿವೇದನೆ ಮಾಡಿಕೊಂಡಾಗ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ನೀಡಲು ಭಗವಂತ ಅಭಯ ನೀಡಲಿದ್ದಾನೆ ಎಂದರು.
ಹಾಲುಮತ ಸಮಾಜದ ಆರಾಧ್ಯ ದೈವವಾಗಿರುವ ಕೋಣಮ್ಮ ಲಕ್ಷ್ಮೀದೇವಿಗೆ ಅಪಾರವಾದ ಶಕ್ತಿ, ಮಹಿಮೆ ಇದೆ. ತಮ್ಮ ಮನೆಯ ಕುಲದೇವರ ನೆನೆಯುವುದರ ಜತೆಗೆ ಈ ಶಕ್ತಿ ದೇವರನ್ನು ಆರಾಧಿಸಿದರೆ ಕಷ್ಟಗಳು ಪರಿಹಾರವಾಗಲಿದೆ ಎಂದು ಹೇಳಿದರು.
ಕೃಷ್ಣರಾಜನಗರದ ಕಾಗಿನೆಲೆ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಕನ್ನಡದ ನೆಲ ದೇವಾಲಯಗಳ ಸಂಸ್ಕೃತಿಯ ತಾಣವಾಗಿದೆ. ಈ ದೇವಾಲಯವನ್ನು ಪುನರುಜ್ಜೀವನಗೊಳಿಸಿ ಮುಂದಿನ ಪೀಳಿಗೆಗೆ ಧಾರ್ಮಿಕ ಭಾವನೆ, ಅರಿವು ಮೂಡಿಸುತ್ತಿರುವ ಗ್ರಾಮಸ್ಥರ ಧಾರ್ಮಿಕ ಭಾವನೆ ಕಾಳಜಿ ಮಾದರಿಯಾಗಿದೆ. ತಮ್ಮ ಮಕ್ಕಳ ಜ್ಞಾನವಾಹಿನಿಯ ಶಕ್ತಿಗೆ ದೇವಿಯ ಅನುಗ್ರಹ ಸದಾ ಇರಲಿ ಶುಭಸಂದೇಶ ನುಡಿದರು.
ಶಾಸಕ ಎಚ್.ಟಿ.ಮಂಜು ಮಾತನಾಡಿ, ಮರಡಿಲಿಂಗೇಶ್ವರ ಕ್ಷೇತ್ರದ ದೇಗುಲ ಪುನರುಜ್ಜೀವನದ ಕಾಮಗಾರಿಗೆ ತಾನು ತಡೆ ನೀಡಿ ತೊಂದರೆ ನೀಡುತ್ತಿರುವೆ ಎಂಬ ಅಪಪ್ರಚಾರವನ್ನು ಮಾಡಲಾಗುತ್ತಿದೆ. ಗುತ್ತಿಗೆದಾರ ನಿಧಾನಗತಿಯಲ್ಲಿ ದೇಗುಲ ನಿರ್ಮಾಣ ಕೆಲಸ ಮಾಡುತ್ತಿದ್ದಾರೆ. ಈ ಸಲುವಾಗಿ ಗುತ್ತಿಗೆದಾರರನ್ನು ಬದಲಾಯಿಸಿ ತ್ವರಿತವಾಗಿ ಗುಣಮಟ್ಟದ ಕೆಲಸದೊಂದಿಗೆ ದೇಗುಲ ನಿರ್ಮಾಣ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿರುವೆ. ದೇಗುಲ ನಿರ್ಮಾಣ ಬೇರೆಡೆಗೆ ವರ್ಗಾಯಿಸಲು ತಿಳಿಸಿಲ್ಲ. ಹಲವರು ಇದಕ್ಕೆ ಬಣ್ಣ ಕಟ್ಟಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಆದಿಹಳ್ಳಿ ಮೀನಾಕ್ಷಿ, ಕೋಣಮ್ಮ ಲಕ್ಷ್ಮೀದೇವಿ ಸೇವಾ ಟ್ರಸ್ಟ್ ಅಧ್ಯಕ್ಷ ಹೆಗ್ಗಡಿ ನಿಂಗರಾಜೇಗೌಡ, ಉದ್ಯಮಿ ಟಿ.ಎಸ್.ಮಂಜು, ಮೈಸೂರಿನ ಅಕ್ಕಿ ಚಿಕ್ಕಣ್ಣ ಕುಟುಂಬದ ಶಾರದಮ್ಮ ಸತ್ಯನಾರಾಯಣ, ಭೂ ದಾಖಲೆಗಳ ನಿವೃತ್ತ ಸಹಾಯಕ ನಿರ್ದೇಶಕ ಕೆ.ಆರ್.ರಮೇಶ್, ಗ್ರಂಥಾಲಯ ಇಲಾಖೆಯ ನಿವೃತ್ತ ಅಧಿಕಾರಿ ಎಸ್.ಪಿ. ಮಂಜೇಗೌಡ, ದೀವಿಕುಮಾರ್, ಕಾಡುಮೆಣಸ ಚಂದ್ರು, ಕೆ.ಆರ್. ನೀಲಕಂಠ, ಮಾರ್ಗೋನಹಳ್ಳಿ ಕಾಳಿಂಗಪ್ಪ, ಅರ್ಚಕ ಅಜ್ಜಗುಂಡೇಗೌಡ, ಟಿ.ಎನ್.ಲೋಕೇಶ್, ಪ್ರವೀಣ್, ಶಂಕರ್, ನಾಗೇಗೌಡ, ನಿಂಗರಾಜೇಗೌಡ, ಧರ್ಮೇಶ್, ತೇಗನಹಳ್ಳಿ, ಮಾರ್ಗೋನಹಳ್ಳಿ, ಕಂಬರಹಳ್ಳಿ, ಹಿರಿಕಳಲೆ, ಕಬ್ಬಾಳು, ಯಲಾದಹಳ್ಳಿ, ಬಾಸಲು ಕುಲದವರು, ಆದಿಹಳ್ಳಿ, ಕ್ಯಾತನಹಳ್ಳಿ, ತೆಂಗಿನಘಟ್ಟ, ಲಕ್ಷ್ಮೀಪುರ ಸೇರಿದಂತೆ ವಿವಿಧೆಡೆಯಿಂದ ಭಕ್ತರು ಭಾಗವಹಿಸಿದ್ದರು.