ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ಗುರುವಾರ ಆಯೋಜಿಸಿದ್ದ ಸುರಕ್ಷಿತ ಚಾಲನೆ ಹ್ಯಾಕಥಾನ್ ಕಾರ್ಯಕ್ರಮದಲ್ಲಿ ಗಣ್ಯರು ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಿದರು. ಡಾ. ಎಸ್.ಎನ್.ಶ್ರೀಧರ, ನಾಗೇಶ್, ಡಾ. ವೈ.ಎಂ.ಮನು, ಡಾ. ಎನ್.ವಾಣಿ, ಬಿ.ಜೆ. ಸಂತೋಷ್, ನರೇಶ್‌ಕುಮಾರ್ ಇತರರಿದ್ದರು. 
ಮಂಡ್ಯ

ಸಂಚಾರ ನಿಯಮಗಳನ್ನು ಪಾಲಿಸಿದಲ್ಲಿ ಅಪಘಾತಗಳು ಕ್ಷೀಣ

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎನ್.ಶ್ರೀಧರ ಅಭಿಪ್ರಾಯ

ನಾಗಮಂಗಲ: ಬೈಕ್ ಮತ್ತು ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎನ್.ಶ್ರೀಧರ ಅಭಿಪ್ರಾಯಪಟ್ಟರು.

ತಾಲೂಕಿನ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿಜಿಎಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದ ವತಿಯಿಂದ ಟ್ರಿಗುಣಾ ಹಾಗೂ ಎಜಿವಿಒಎಸ್ ಹಣಕಾಸು ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸುರಕ್ಷಿತ ಚಾಲನೆ ಹ್ಯಾಕಥಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಾಹನ ಚಾಲನೆಯ ಸಮಯದಲ್ಲಿ ಏಕಾಗ್ರತೆ ಇರಬೇಕು. ದ್ವಿಚಕ್ರ ವಾಹನ ಸವಾರರು ಹಾಫ್ ಹೆಲ್ಮೆಟ್ ಧರಿಸದೆ, ಉತ್ತಮ ಗುಣಮಟ್ಟದ ಸುರಕ್ಷಿತವಾದ ಹೆಲ್ಮೆಟ್‌ಗಳನ್ನೇ ಧರಿಸಬೇಕು. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡುವುದು, ರಸ್ತೆಯಲ್ಲಿ ಅಡ್ಡಾದಿಡ್ಡಿ ಚಾಲನೆ ಮಾಡುವುದರಿಂದ ಅಪಘಾತಗಳು ಸಂಭವಿಸಿ, ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ದ್ವಿಚಕ್ರ ವಾಹನ ಸವಾರ ಮತ್ತು ಹಿಂಬದಿಯಲ್ಲಿ ಕುಳಿತು ಸಂಚರಿಸುವ ವ್ಯಕ್ತಿಯೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗೇಶ್ ಮಾತನಾಡಿ, ಅಪಘಾತಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ದೇಶದ ಯುವಶಕ್ತಿಯ ಮೇಲೆ ಹೆಚ್ಚು ಜವಾಬ್ದಾರಿಯಿದೆ. ರಸ್ತೆ ಅಪಘಾತಕ್ಕೀಡಾದವರ ಕುಟುಂಬಸ್ಥರ ಪರಿಸ್ಥಿತಿಯನ್ನು ಯೋಚಿಸಿದರೆ ಸುರಕ್ಷತೆಗೆ ಎಷ್ಟು ಪ್ರಾಮುಖ್ಯತೆ ಕೊಡಬೇಕೆಂದು ಗೊತ್ತಾಗುತ್ತದೆ. ಒಂದು ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಕುಟುಂಬಕ್ಕೆ ಆಧಾರಸ್ಥಂಭವಾಗಿರುವ ಯುವಕರು ಯಾವುದೇ ವಾಹನ ಚಾಲನೆ ಮಾಡುವಾಗ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸಿಕೊಂಡು ರಸ್ತೆ ಅಪಘಾತ ತಡೆಗಟ್ಟುವ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ತಾಂತ್ರಿಕ ಕೌಶಲ್ಯ ಹಾಗೂ ತಂಡದ ಕಾರ್ಯನಿರ್ವಹಣಾ ಮನೋಭಾವವನ್ನು ಬೆಳೆಸುವಲ್ಲಿ ಈ ಹ್ಯಾಕಥಾನ್ ಪ್ರಮುಖ ವೇದಿಕೆಯಾಗಿತ್ತು. ಉತ್ತಮ ಆಲೋಚನೆಗಳು ಮತ್ತು ಪರಿಹಾರಗಳನ್ನು ಮಂಡಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹ್ಯಾಕಥಾನ್‌ನಲ್ಲಿ ಪಾಲ್ಗೊಂಡ 340ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಟ್ರಿಗುಣಾ ಹಾಗೂ ಎಜಿವಿಒಎಸ್ ಹಣಕಾಸು ಸಂಸ್ಥೆ ವತಿಯಿಂದ ಉಚಿತವಾಗಿ ಹೆಲ್ಮೆಟ್‌ಗಳನ್ನು ವಿತರಿಸಲಾಯಿತು.

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ ಹಾಗೂ ಬಿಜಿಎಸ್‌ಐಟಿ ಪ್ರಾಂಶುಪಾಲೆ ಡಾ. ಬಿ.ಎನ್. ಶೋಭಾ ಮಾತನಾಡಿದರು.

ಕಾರ್ಯಕ್ರಮದ ಸಂಯೋಜಕ ಬಿಜಿಎಸ್ ಐಟಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ವೈ.ಎಂ.ಮನು, ಸಹ ಪ್ರಾಧ್ಯಾಪಕಿ ಡಾ. ಎನ್.ವಾಣಿ , ಸಹಾಯಕ ಪಾಧ್ಯಾಪಕ ಬಿ.ಜೆ.ಸಂತೋಷ್, ಬೆಳ್ಳೂರು ಪೊಲೀಸ್ ಠಾಣೆಯ ಪಿಎಸ್‌ಐ ನರೇಶ್‌ಕುಮಾರ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ, ಬಿಜಿಎಸ್‌ಐಟಿ ಸೇರಿದಂತೆ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.