ಶ್ರೀರಂಗಪಟ್ಟಣ: ಇತಿಹಾಸ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಗುರುವಾರ ಸಂಜೆ ಭೇಟಿ ನೀಡಿ ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದರು.
ಜಿಲ್ಲಾಡಳಿತದೊಂದಿಗೆ ಆಗಮಿಸಿದ್ದ ಸಚಿವರನ್ನು ದೇವಾಲಯದ ಆಡಳಿತ ಮಂಡಳಿಯಿಂದ ಗೌರವ ಸಮರ್ಪಣೆ ನೀಡಿ ಸ್ವಾಗತಿಸಲಾಯಿತು. ದೇವಾಲಯದಲ್ಲಿ ಶ್ರೀದೇವಿ, ಭೂದೇವಿ, ಶ್ರೀರಂಗನಾಯಕಿ ಅಮ್ಮನವರ ಸಮೇತ ಶೇಷಶಯನ ಶ್ರೀ ರಂಗನನಾಥ ಸ್ವಾಮಿ ದರ್ಶನ ಪಡೆದರು. ಪ್ರಧಾನ ಅರ್ಚಕರು ವಿಜಯಸಾರಥಿ ಹಾಗೂ ಪ್ರಸನ್ನ ಸ್ವಾಮಿಗೆ ತುಳಸಿ ಅರ್ಚನೆ ಹಾಗೂ ಶ್ರೀ ರಂಗನಾಯಕಿ ಅಮ್ಮನವರಿಗೆ ಕುಂಕುಮಾರ್ಚನೆ ಸಲ್ಲಿಸಿದರು. ಸುಮಾರು ಅರ್ಧ ಗಂಟೆ ಕಾಲ ದೇವಸ್ಥಾನದ ಮಾಹಿತಿ ಕಲೆಹಾಕಿದರು.
ಬಿಜೆಪಿ ಟೌನ್ ಅಧ್ಯಕ್ಷ ಸುಧಾಕರ್, ಹನುಮ ಸಂಕೀರ್ತನ ಸಮಿತಿ ಪ್ರಮುಖ ಚಂದನ್, ಲಕ್ಷ್ಮೀನಾರಾಯಣ, ಕಂಠಿ ರಘು, ಸೇರಿಂದತೆ ಹಿಂದೂ ಸಂಘಟನೆ ಮುಖಂಡರು ಶ್ರೀ ಮೂಡಲು ಬಾಗಿಲು ಆಂಜನೇಯಸ್ವಾಮಿ ದೇವರ ಭಾವಚಿತ್ರವನ್ನು ಕೇಂದ್ರ ಸಚಿವರಿಗೆ ನೀಡಿ ಅಭಿನಂದಿಸಿದರು. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಒ ಕೆ.ಆರ್.ನಂದಿನಿ, ತಹಸೀಲ್ದಾರ್ ಚೇತನಾ ಯಾದವ್, ದೇವಾಲಯದ ಇಒ ಉಮಾ ಇದ್ದರು.