ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರೈತ ಸಂಘಟನೆಯ ಕಾರ್ಯಕರ್ತರು ಮದ್ದೂರು ತಾಲೂಕಿನ ಕೌಡ್ಲೆ ಉಪವಿಭಾಗ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು. ಪ್ರಭುಲಿಂಗು, ಕೀಳಘಟ್ಟ ನಂಜುಂಡಯ್ಯ, ಶಿವಲಿಂಗಯ್ಯ, ವೆಂಕಟೇಶ್, ರಾಮೇಗೌಡ, ಉಮೇಶ್ ಇದ್ದರು. 
ಮಂಡ್ಯ

ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬಕ್ಕೆ ಖಂಡನೆ

ಸೆಸ್ಕ್ ಕಚೇರಿ ಬಳಿ ರೈತ ಸಂಘ ಪ್ರತಿಭಟನೆ

ಮದ್ದೂರು: ವಿದ್ಯುತ್ ಸಂಪರ್ಕ ಕಲ್ಪಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ವಿದ್ಯುತ್ ಇಲಾಖೆ ಅಧಿಕಾರಿಗಳ ವಿರುದ್ಧ ರೈತ ಸಂಘಟನೆಯ ಕಾರ್ಯಕರ್ತರು ತಾಲೂಕಿನ ಕೌಡ್ಲೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ತಾಲೂಕಿನ ಕೌಡ್ಲೆ ಗ್ರಾಮದ ಇಲಾಖೆಯ ಕಚೇರಿ ಬಳಿ ಮಂಗಳವಾರ ಜಮಾವಣೆಗೊಂಡ ಸಂಘಟನೆ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಒದಗಿಸುವಂತೆ ಆಗ್ರಹಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು ಮಾತನಾಡಿ, ಹರಳಕೆರೆ ಗ್ರಾಮದ ರೈತ ನಾರಾಯಣನ ಪುತ್ರ ಚನ್ನಕೇಶವ ಎಂಬುವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕೌಡ್ಲೆ ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಇಂಜಿನಿಯರ್ ನಾಗೇಶ್ ಎಂಬುವರು ಕಂಬಗಳನ್ನು ಹಾಕಿ ವೈರ್‌ಗಳನ್ನು ಎಳೆದು ವಿದ್ಯುತ್ ಸಂಪರ್ಕ ಕೊಡದೆ ಸುಮಾರು 4 ತಿಂಗಳಿಂದ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ರೈತ ಚೆನ್ನಕೇಶ ಎಂಬುವರು ರೈತ ಸಂಘಕ್ಕೆ ದೂರು ಕೊಟ್ಟ ಹಿನ್ನೆಲೆಯಲ್ಲಿ ರೈತ ಸಂಘದ ಮುಖಂಡರೆಲ್ಲರೂ ಸೇರಿ ಸೆಸ್ಕ್ ಸಹಾಯಕ ಇಂಜಿನಿಯರ್ ಮೋಹನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು. ಇಂಜಿನಿಯರ್ ಮೋಹನ್ ಅವರು ನಾಗೇಶ್ ಅವರನ್ನು ಸ್ಥಳಕ್ಕೆ ಕರೆಸಿ ವಿದ್ಯುತ್ ಸಂಪರ್ಕ ಕೊಡುವಂತೆ ತಾಕೀತು ಮಾಡಿ 2 ವಾರ ಕಳೆದರೂ ವಿದ್ಯುತ್ ಸಂಪರ್ಕ ಕೊಡದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಶೀಘ್ರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಷಯ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಇಂಜಿನಿಯರ್ ಮೋಹನ್ ಅವರು, ಎರಡು ವಾರಗಳಲ್ಲಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಪ್ರಭುಲಿಂಗು, ಶಿವಲಿಂಗಯ್ಯ, ರಾಮೇಗೌಡ, ವೆಂಕಟೇಶ, ಉಮೇಶ, ತಿಮ್ಮೇಶ್, ಮರಿಲಿಂಗಯ್ಯ, ಮಂಜೇಶ, ನಿಂಗೇಗೌಡ, ಮಧು ,ರಾಹುಲ್, ಚನ್ನೇಶ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.