ಕಿಕ್ಕೇರಿ: ಹೋಬಳಿಯ ಐಕನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಐಕನಳಮ್ಮ, ವೀರಭದ್ರೇಶ್ವರ ಸ್ವಾಮಿ ಹಬ್ಬದ ಅಂಗವಾಗಿ ಸಿಡಿ ಹಬ್ಬ, ಜಾತ್ರೆ ವಿಜೃಂಭಣೆಯಿಂದ ಜರುಗಿತು.
ದೀಪಾವಳಿ ಹಬ್ಬದ ರಾತ್ರಿಯಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯುವ ಜಾತ್ರೆಗೆ ಸಾವಿರಾರು ಜನರು ಆಗಮಿಸಿದ್ದರು. ಈ ಬಾರಿ ತೋಪಣ್ಣಯ್ಯನ ಬಳಗದ ಭಕ್ತರು ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿದ್ದರು. ಗ್ರಾಮದ ಹೊರವಲಯದಲ್ಲಿರುವ ಕೆರೆಯ ತಟದಲ್ಲಿರುವ ದೇವಾಲಯದಲ್ಲಿ ಐಕನಳಮ್ಮ(ಲಕ್ಷ್ಮೀದೇವಿ) ದೇವಿಗೆ ವಿಶೇಷ ಪೂಜೆಗಳು ನಡೆದವು. ಗ್ರಾಮವನ್ನು ವಿದ್ಯುತ್ ದೀಪಾಲಂಕಾರ, ತಳಿರು ತೋರಣ, ರಂಗವಲ್ಲಿಯಿಂದ ಸಿಂಗರಿಸಲಾಗಿತ್ತು.
ದೇಗುಲ ನವೀಕರಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ದೇವಿಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜೆ, ಹೋಮ ಹವನ ಜರುಗಿತು. ಸಿಡಿರಾಯನ ಕಂಬ ಎಳೆಯುವ, ವೀರಮಕ್ಕಳು ಸಿಡಿಕಂಬಕ್ಕೆ ಏರಿ ಹರಕೆ ಒಪ್ಪಿಸುವುದನ್ನು ಜಾತ್ರೆ ನವೀಕರಣದ ಹಿನ್ನೆಲೆಯಲ್ಲಿ ಸ್ಥಗಿತವಾಗಿತ್ತು. ತುಳಸಿ ಗ್ರಾಮದಿಂದ ವೀರಭದ್ರೇಶ್ವರ ಸ್ವಾಮಿಯ ಭಂಟರು, ವೀರ ಮಕ್ಕಳು ಆಗಮಿಸಿದ್ದರು. ಒಡವೆ, ವಸ್ತ್ರಗಳನ್ನು ಮೆರವಣಿಗೆ ಮೂಲಕ ಗ್ರಾಮದ ಮುಖಂಡರು ಮಂಗಳವಾದ್ಯದೊಂದಿಗೆ ತಂದು ದೇವಿಗೆ ತೊಡಿಸಿದರು. ಉಪವಾಸ ವ್ರತವಿದ್ದ ಭಕ್ತರು ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಗುಡಿಯ ಬಳಿ ನರ್ತಿಸುತ್ತಿದ್ದ ವೀರಮಕ್ಕಳು, ದೇವರ ಭಂಟರ ಬಳಿ ವೀರಮಕ್ಕಳು ಬೆತ್ತದ ಕೋಲಿನಿಂದ ಭಕ್ತರ ತಲೆಗೆ ಮುಟ್ಟಿಸಿ ದೇವಿಯಲ್ಲಿ ಒಳಿತಿಗಾಗಿ ವಿನಂತಿಸಿದರು. ಹರಕೆ ಹೊತ್ತ ಭಕ್ತರು ಬಾಯಿಬೀಗ ಹಾಕಿಸಿಕೊಂಡು ದೇಗುಲ ಪ್ರದಕ್ಷಿಣೆ ಹಾಕಿದರು.
ದೇವಿಯ ಅಂಗರಕ್ಷಕ ಭಂಟರಾದ ಸೋಮನ ಕುಣಿತ, ಚಿಕ್ಕಯ್ಯ, ದೊಡ್ಡಯ್ಯ ದೇವರ ಕುಣಿತ, ಮೆರವಣಿಗೆ, ಬಾಯಿ ಬೀಗದಂತಹ ಹಲವು ಹರಕೆ ಕಾರ್ಯಕ್ರಮ ಹಬ್ಬಕ್ಕೆ ಮೆರುಗು ನೀಡಿತು. ತುಳಸಿ ಗ್ರಾಮದ ವೀರಮಕ್ಕಳು ಕತ್ತಿ, ಕೋಲನ್ನು ಹಿಡಿದು ದೇವಿಗೆ ಕೋಲಿನ ಸೇವೆ, ಕತ್ತಿವರಸೆ ಸೇವೆ ಅರ್ಪಿಸಿದರು. ಗ್ರಾಮದ ಪ್ರತಿ ಮನೆಗಳ ಮುಂದೆ ಚಿಕ್ಕಯ್ಯ, ದೊಡ್ಡಯ್ಯ ದೇವರ, ಲಕ್ಷ್ಮೀದೇವಿ ಅಮ್ಮನವರ ಮೆರವಣಿಗೆ ಆಗಮಿಸಿದಾಗ ಜನರು ಹಣ್ಣು, ಶ್ಯಾವಿಗೆ, ಕಾಯಿ ಹಾಲು, ಮೊಳಕೆ ಕಟ್ಟಿದ ಹುರುಳಿಕಾಳು ಸಾಂಬಾರು ನೈವೇದ್ಯ ಅರ್ಪಿಸಿದರು.
ದೇವಿಯ ಬಳಗದವರಾದ ಕೆಂಗಪ್ಪ, ಹುಚ್ಚಮ್ಮ, ಬುಡಿಯಪ್ಪ, ತೋಪಣ್ಣಯ್ಯ ಪಂಗಡದವರು, ಗ್ರಾಮ ಮುಖಂಡರು ಹಾಜರಿದ್ದರು.