ಕಿಕ್ಕೇರಿ: ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರೂ ಸರಿಸಮನಾಗಿ ಬದುಕಬೇಕು ಎಂಬುದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಆಶಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಶ್ರೀನಿವಾಸ ಗೌಡ ತಿಳಿಸಿದರು.
ಹೋಬಳಿಯ ಕಾರಿಗಾನಹಳ್ಳಿ ಗ್ರಾಮದಲ್ಲಿ ಅರ್ಹ ಅಂಗವಿಕಲರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುಕ್ರವಾರ ನಡೆದಾಡಲು ಉಪಕರಣ ವಿತರಿಸಿ ಮಾತನಾಡಿ, ಇದುವರೆವಿಗೂ ಕಿಕ್ಕೇರಿ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಅರ್ಹರಿಗೆ ನಡೆದಾಡಲು ವಿವಿಧ ಸಲಕರಣೆ ವಿತರಿಸಲಾಗಿದೆ. ಅರ್ಹ 5 ಅಂಗವಿಕಲರಿಗೆ ವಾತ್ಸಲ್ಯ ಮನೆ ಯೋಜನೆಯಲ್ಲಿ ಮನೆ ನೀಡಲಾಗಿದೆ. ಅಸಕ್ತರು ನೆಮ್ಮದಿಯಾಗಿ ಬದುಕಲು ಸಂಸ್ಥೆ ಸದಾ ಬದ್ಧವಿದೆ ಎಂದರು.
ಸಂಸ್ಥೆ ಗ್ರಾಮೀಣ ಪ್ರದೇಶದ ಜನತೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಜ್ಞಾನವಿಕಾಸ ಯೋಜನೆಯಡಿಯಲ್ಲಿ ಮಹಿಳೆಯರ ಸಬಲೀಕರಣ, ಆರ್ಥಿಕ ಸುಧಾರಣೆಗಾಗಿ ಆರ್ಥಿಕ ವಹಿವಾಟನ್ನು ಮಹಿಳೆಯರಿಂದ ಮಾಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಶಿಷ್ಯವೇತನ, ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಉತ್ತಮ ಶಿಕ್ಷಣಕ್ಕೆ ಶ್ರಮಿಸುತ್ತಿದೆ ಎಂದು ಮಾಹಿತಿ ನೀಡಿದರು.
ಸಂಸ್ಥೆಯ ಪ್ರವೀಣ್, ಸಂಘದ ಸದಸ್ಯರು ಹಾಜರಿದ್ದರು.