ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಬಳಿ ಅರ್ಹ ಫಲಾನುಭವಿಗಳಿಗೆ ಲಾಟರಿ ಡ್ರಾ ಮೂಲಕ ನಿವೇಶನ ವಿತರಿಸುವ ಪ್ರಕ್ರಿಯೆ ಕೈಬಿಟ್ಟು, ನೈಜ ಫಲಾನುಭವಿಗಳಿಗೆ ನೇರವಾಗಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಮುತ್ತು ಕಾರ್ಯಕರ್ತರು ನಿವೇಶನ ಅರ್ಜಿದಾರರೊಂದಿಗೆ ಪುರಸಭೆ ಕಚೇರಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂಬ ವದಂತಿ ಆಧರಿಸಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದ ಪಟ್ಟಣದ ನೂರಾರು ನಿವಾಸಿಗಳು ಜೆಡಿಎಸ್ ಮುಖಂಡರೊಂದಿಗೆ ಪುರಸಭೆ ಆವರಣದಲ್ಲಿ ಜಮಾವಣೆಗೊಂಡರು. ಲಾಟರಿ ಮೂಲಕ ನಿವೇಶನ ಹಂಚಿಕೆ ಮಾಡಿದರೆ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುತ್ತದೆ. ಲಾಟರಿಯಲ್ಲಿ ಯಾರಿಗೆ ಬೇಕಾದರೂ ನಿವೇಶನ ಸಿಗಬಹುದು. ಹೀಗಾಗಿ ಲಾಟರಿ ಡ್ರಾ ಮೂಲಕ ನಿವೇಶನ ಹಂಚಿಕೆ ಕೈಬಿಟ್ಟು ಈ ಹಿಂದೆ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರನ್ನು ಗಮನದಲ್ಲಿಟ್ಟುಕೊಂಡು ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಪುರಸಭೆ ಆಡಳಿತಾಧಿಕಾರಿ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹಾಗೂ ಮುಖ್ಯಾಧಿಕಾರಿ ಸತೀಶ್ಕುಮಾರ್ ಪಟ್ಟಣ ವ್ಯಾಪ್ತಿಯ ಹಾರೋಹಳ್ಳಿ ಸಮೀಪ ಅರ್ಹ ಫಲಾನುಭವಿಗಳಿಗೆ ವಿತರಿಸಲು ನಿಗದಿ ಮಾಡಿರುವ 178 ನಿವೇಶನಗಳನ್ನು ಲಾಟರಿ ಪ್ರಕ್ರಿಯೆ ಮೂಲಕ ಹಂಚಿಕೆ ಮಾಡಲು ಹೊರಟಿರುವುದು ಸರಿಯಲ್ಲ. ಅರ್ಹ ಫಲಾನುಭವಿಗಳನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಲಾಟರಿ ಪ್ರಕ್ರಿಯೆಗೂ ಮುನ್ನ ಆಯ್ಕೆಯಾಗಿರುವ ಎಲ್ಲ ಅರ್ಹ ಅರ್ಜಿದಾರರ ಪಟ್ಟಿ ಬಿಡುಗಡೆ ಮಾಡಬೇಕು. ಈ ಅರ್ಜಿದಾರರ ಪೈಕಿ ನೈಜ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು. ಆದರೆ ಲಾಟರಿ ಡ್ರಾ ಮೂಲಕ ಫಲಾನುಭವಿಗಳ ಆಯ್ಕೆಗೆ ನಮ್ಮ ವಿರೋಧವಿದೆ ಎಂದು ಹೇಳಿದರು.
ವಿರೋಧ ಇದ್ದರೂ ನಿವೇಶನಗಳನ್ನು ಹಂಚಿಕೆ ಮಾಡಲು ಮುಂದಾಗಿರುವುದು ತಪ್ಪು. ಪಟ್ಟಣದ ಸಾವಿರಾರು ನಿವಾಸಿಗಳು ನಿವೇಶನಕ್ಕಾಗಿ 2007ರಿಂದ ಅರ್ಜಿ ಸಲ್ಲಿಸಿದ್ದಾರೆ. ಪುರಸಭೆಯ ಅಧಿಕಾರಿಗಳು ಈ ಹಿಂದಿನ ಅರ್ಜಿದಾರರನ್ನು ಪರಿಗಣನೆಗೆ ತೆಗೆದುಕೊಳ್ಳದೆ ಹೊಸದಾಗಿ ಸಲ್ಲಿಸಿರುವ ಅರ್ಜಿಗಳ ಆಧರಿಸಿ ನಿವೇಶನ ಹಂಚಿಕೆಗೆ ಮುಂದಾಗಿದ್ದಾರೆ. ಪುರಸಭೆಯಲ್ಲಿ ಎರಡು ಮೂರು ಬಾರಿ ಅರ್ಜಿ ಸಲ್ಲಿಸಿದ್ದರೂ ನಿವೇಶನ ಹಂಚಿಕೆ ಮಾಡದ ಹಿನ್ನೆಲೆಯಲ್ಲಿ ಸಾಕಷ್ಟು ನಿವಾಸಿಗಳು ಈ ಬಾರಿ ಅರ್ಜಿ ಸಲ್ಲಿಸಿಲ್ಲ. ಒಂದು ಅರ್ಜಿ ಸಲ್ಲಿಕೆಗೆ ಸಾವಿರಾರು ರೂ. ಖರ್ಚಾಗುತ್ತದೆ, ಜತೆಗೆ ಸಮಯವೂ ವ್ಯರ್ಥ. ಹೀಗಾಗಿ ಕೆಲವರು ಹಿಂದಿನ ಅರ್ಜಿಗಳನ್ನು ಪರಿಗಣಿಸುತ್ತಾರೆ ಎಂದು ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಹೊಸ ಅರ್ಜಿಗಳನ್ನು ಮಾತ್ರ ಪರಿಗಣಿಸಿದರೆ ಉಳಿದವರಿಗೆ ಅನ್ಯಾಯವಾಗುತ್ತದೆ ಎಂದು ಆರೋಪಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಆದರ್ಶ ಅವರು, ಪ್ರತಿಭಟನಾಕಾರರ ಸಮಸ್ಯೆ ಆಲಿಸಿ ನಿಮ್ಮ ವಿಚಾರಗಳನ್ನು ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಗಮನಕ್ಕೆ ತಂದು ಅವರ ಮಾರ್ಗದರ್ಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಪುರಸಭೆ ಮಾಜಿ ಸದಸ್ಯರಾದ ಆರ್.ಸೋಮಶೇಖರ್, ಜ್ಯೋತಿಲಕ್ಷ್ಮೀ, ಅರ್ಚನಾಚಂದ್ರು, ಕೃಷ್ಣ, ಚಂದ್ರು, ಶಿವಕುಮಾರ್, ಮುಖಂಡರಾದ ಕೃಷ್ಣೇಗೌಡ ಪಟೇಲ, ಶೋಭಾ ಕುಮಾರ್ ಇತರರು ಇದ್ದರು.