ಕೆ.ಎಂ.ದೊಡ್ಡಿ: ರೈತ ಉತ್ಪಾದಕ ಕಂಪನಿಗಳು ರೈತರ ಸವಾರ್ಂಗೀಣ ಪ್ರಗತಿಗೆ ಪೂರಕವಾಗಿದ್ದು, ಕಂಪನಿಯ ಷೇರುದಾರರಾಗಿರುವ ರೈತರು ಕಂಪನಿಯ ವ್ಯವಹಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸಂಸ್ಥೆಗಳು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಸಾಧ್ಯ ಎಂದು ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಮಂಡ್ಯ ಜಿಲ್ಲಾ ಅಧ್ಯಕ್ಷ ಕಾರಸವಾಡಿ ಮಹದೇವು ಹೇಳಿದರು.
ಇಲ್ಲಿನ ಮಾರುತಿ ಪಾರ್ಟಿ ಹಾಲ್ ಆವರಣದಲ್ಲಿ ಆಯೋಜಿಸಿದ್ದ ನೇಚರ್ ಪ್ಯೂರ್ ರೈತ ಉತ್ಪಾದಕ ಕಂಪನಿ ಲಿಮಿಟೆಡ್‌ನ ರೈತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗಾಗಿ ರೈತರೇ ಸೇರಿಕೊಂಡು ನಡೆಸುವ ವ್ಯವಸ್ಥೆಯಾಗಿ ರೈತ ಉತ್ಪಾದಕ ಕಂಪನಿಗಳನ್ನು ರೂಪಿಸಿದ್ದು ವ್ಯವಸ್ಥೆಯನ್ನು ಬಲಪಡಿಸುವ ಜವಾಬ್ದಾರಿ ರೈತ ಷೇರುದಾರರ ಮೇಲೂ ಇದೆ ಎಂದು ಹೇಳಿದರು.
ರೈತರು ಕಂಪನಿಯ ಮೂಲಕ ಕೃಷಿ ಪರಿಕರಗಳು, ಬಿತ್ತನೆ ಬೀಜ ರಸಗೊಬ್ಬರ ಸೇರಿದಂತೆ ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸುವ ಮೂಲಕ ಕಂಪನಿಯ ವಹಿವಾಟು ಹೆಚ್ಚಿಸಬೇಕು. ಕಂಪನಿಯ ನಿವ್ವಳ ಆದಾಯ ಹೆಚ್ಚುವುದರ ಜತೆಗೆ ರೈತರು ಹೂಡಿಕೆ ಮಾಡಿರುವ ಷೇರು ಮೌಲ್ಯವೂ ವೃದ್ಧಿಯಾಗಲು ಸಾಧ್ಯ ಎಂದರು.
ರೈತರು ಬೆವರು ಸುರಿಸಿ ಉತ್ಪಾದಿಸುವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ರೈತರು ತಾವು ಉತ್ಪಾದಿಸಿದ ವಸ್ತುಗಳ ಬ್ರಾೃಂಡ್‌ಗಳನ್ನು ಪ್ರೋತ್ಸಾಹಿಸಬೇಕು. ಮಧ್ಯವರ್ತಿಗಳಿಂದ ಉತ್ಪಾದನೆಯಾಗುವ ಬ್ರಾೃಂಡ್‌ಗಳ ಅವಲಂಬನೆ ಕಡಿಮೆ ಮಾಡಿ, ರೈತರೇ ರೂಪಿಸಿರುವ ಬ್ರಾೃಂಡ್‌ಗಳನ್ನು ಬಳಕೆ ಮಾಡುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನೇಗಿಲ ಸೇನೆ ಸಂಸ್ಥಾಪಕ ಅಧ್ಯಕ್ಷ ಯೋಗೇಶ್ ಅಪ್ಪಾಜಯ್ಯ ಮಾತನಾಡಿ, ಪ್ರಸ್ತುತ ಕೃಷಿ ಕ್ಷೇತ್ರದಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ತಾವು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸಿಕೊಂಡು ನೇರ ಮಾರುಕಟ್ಟೆ ಕಂಡುಕೊಳ್ಳಲು ರೈತ ಉತ್ಪಾದಕ ಕಂಪನಿಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕನ್ನು ಪ್ರಧಾನ ಕಚೇರಿಯನ್ನಾಗಿ ಹೊಂದಿರುವ ನೇಚರ್ ಪ್ಯೂರ್ ರೈತ ಉತ್ಪಾದಕ ಕಂಪನಿ ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಹೆಜ್ಜೆ ಇಡುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ಉತ್ಪಾದಕ ಸಂಸ್ಥೆಗಳ ಪ್ರೋತ್ಸಾಹದಾಯಕ ಯೋಜನೆಗಳಡಿ ಕೃಷಿ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಸ್ಥೆ ನೋಂದಣಿಯಾಗಿದ್ದು, ಪ್ರಗತಿಪರ ರೈತರು ಒಂದಾಗಿ ಸೇರಿ ಕೃಷಿ ಆಧಾರಿತ ವ್ಯವಹಾರವನ್ನು ವೃದ್ಧಿಸುವುದು ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು.
ನೇಚರ್ ಪ್ಯೂರ್ ಕಂಪನಿಯು ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ರೈತರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಗುರಿ ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಗೆ ಹೆಚ್ಚಿನ ಪ್ರಮಾಣದಲ್ಲಿ ಷೇರು ಸಂಗ್ರಹ ಮಾಡಿರುವ ನಿರ್ದೇಶಕರನ್ನು ಹಾಗೂ ಉತ್ತಮ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಷೇರುದಾರರಾದ ಪುಟ್ಟಸ್ವಾಮಿ, ಕೃಷಿ ಅಧಿಕಾರಿ ಭವಾನಿ ಹಾಗೂ ನಿರ್ದೇಶಕ ಆನಂದ್ ಅವರನ್ನು ಸನ್ಮಾನಿಸಲಾಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಪರಮೇಶ್, ರಾಜ್ಯ ರೈತ ಉತ್ಪಾದಕ ಕಂಪನಿ ನಿರ್ದೇಶಕ ಎನ್.ಜೆ.ರಾಜೇಶ್, ಬಸರಾಳು ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಚಿಕ್ಕೇಗೌಡ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭವಾನಿ, ಸಂಘದ ಅಧ್ಯಕ್ಷ ಟಿ.ಬಿ.ಹಳ್ಳಿ ತಿಮ್ಮೇಶ್, ನಿರ್ದೇಶಕರಾದ ಕೃಷ್ಣ, ಶಂಕರೇಗೌಡ, ನಂಜೇಗೌಡ, ರಾಮಕೃಷ್ಣ, ಆನಂದ್, ಬಸವರಾಜು, ವೆಂಕಟೇಶ್, ಮನೋಜ್, ಪುನೀತ್, ನಾಗರಾಜು, ಎಸ್.ಎಚ್.ಪುಟ್ಟಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.