ನಾಗಮಂಗಲ: ಇಂಡೋನೆಷ್ಯಾ ವಿಶ್ವವಿದ್ಯಾಲಯವು ಕಳೆದ ಸೆ.25ರಂದು ಬಿಡುಗಡೆ ಮಾಡಿದ ಯುಐ ಗ್ರೀನ್ ಮೆಟ್ರಿಕ್ ಸಸ್ಟೈನಬಲ್ ಯೂನಿವರ್ಸಿಟಿ ರ‌್ಯಾಂಕಿಂಗ್-2026 ಶ್ರೇಯಾಂಕದಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯವು ರಾಜ್ಯದ ವಿಶ್ವವಿದ್ಯಾಲಯಗಳ ಪೈಕಿ ಐದನೆಯ ಸ್ಥಾನ ಪಡೆದುಕೊಂಡಿದೆ.
ಗ್ರೀನ್ ಮೆಟ್ರಿಕ್ ಶ್ರೇಯಾಂಕವು ಹಸಿರು ಕ್ಯಾಂಪಸ್ ಮತ್ತು ಪರಿಸರ ಸುಸ್ಥಿರತೆ, ಪರಿಸರ ಸಂರಕ್ಷಣೆಗೆ ಪೂರಕವಾಗಿ ವಿಶ್ವವಿದ್ಯಾಲಯದ ಬದ್ಧತೆ, ಸುಸ್ಥಿರತೆಗಾಗಿ ತೆಗೆದುಕೊಂಡ ಕ್ರಮಗಳು, ಸುಸ್ಥಿರ ಮೂಲಸೌಕರ್ಯ, ಹಸಿರು ಇಂಧನ ಬಳಕೆ ಮತ್ತು ಹವಾಮಾನ ಬದಲಾವಣೆ, ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ, ನೀರಿನ ಸಂರಕ್ಷಣೆ, ಹಸಿರು ಸಾರಿಗೆ, ಸುಸ್ಥಿರ ಶಿಕ್ಷಣ ಮತ್ತು ಸಂಶೋಧನೆ, ಆಡಳಿತ ಮತ್ತು ಡಿಜಿಟಲೀಕರಣ ಈ ಎಂಟು ಮಾನದಂಡಗಳ ಆಧಾರದ ಮೇಲೆ ಮೌಲ್ಯಮಾಪನ ನಡೆಸಲಾಗಿದೆ.
ವಿಶ್ವಾದ್ಯಂತ ಒಟ್ಟು 2016 ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದವು. ಭಾರತದ 68 ವಿಶ್ವವಿದ್ಯಾಲಯಗಳನ್ನು ರ‌್ಯಾಂಕಿಂಗ್‌ಗೆ ಪರಿಗಣಿಸಲಾಗಿತ್ತು. ಆದಿಚುಂಚನಗಿರಿ ವಿವಿಯು ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 49ನೇ ಸ್ಥಾನ ಹಾಗೂ ರಾಜ್ಯದಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ.