ಕೊಲೆಯಾದ ದೀಪಕ್  
ಮಂಡ್ಯ

ಯುವಕನನ್ನು ಕೊಲೆಗೈದಿದ್ದವನ ಬಂಧನ

ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರೀರಂಗಪಟ್ಟಣ ಟೌನ್ ಠಾಣಾ ಪೊಲೀಸರು ಯಶಸ್ವಿ

ಶ್ರೀರಂಗಪಟ್ಟಣ: ಯುವಕನನ್ನು ಕೊಲೆಗೈದು ಕಾವೇರಿ ನದಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಶ್ರೀರಂಗಪಟ್ಟಣ ಟೌನ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದ ಗೂಡ್ಸ್ ಆಟೋ ಚಾಲಕ ಅನುಕುಮಾರ್ ಬಂಧಿತ ಆರೋಪಿ.

ಏನಾಗಿತ್ತು?: ಸೆ.15ರಂದು ಗಂಜಾಂನ ನಿಮಿಷಾಂಬ ರಸ್ತೆಯ ಕಾವೇರಿ ನದಿಯ ಸ್ನಾನ ಘಟ್ಟದಲ್ಲಿ ಹಾಸನ ಜಿಲ್ಲೆ ಆಲೂರು ತಾಲೂಕಿನ ಹಳೇ ಸಂತೆ ಬೀದಿ ನಿವಾಸಿ ದೀಪಕ್ (32) ಶವ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವೃತ್ತಿಯಲ್ಲಿ ಗೂಡ್ಸ್ ಆಟೋ ಚಾಲಕ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದಿತ್ತು.

ಅನುಕುಮಾರ್ ಮತ್ತು ದೀಪಕ್ ಸ್ನೇಹಿತರಾಗಿದ್ದು, ಎರಡೂವರೆ ತಿಂಗಳ ಹಿಂದೆ ಹಾಸನಕ್ಕೆ ಹೋಗಿದ್ದ ವೇಳೆ ಇಬ್ಬರು ಮದ್ಯಪಾನ ಮಾಡಿದ್ದರು. ಈ ವೇಳೆ ಅನುಕುಮಾರ್‌ನ ಹೆಂಡತಿಗೆ ಕರೆ ಮಾಡಿದ್ದ ದೀಪಕ್, ಅನುಕುಮಾರ್‌ರಂತೆ ಮಾತನಾಡಿ, ಆಕೆಯೊಂದಿಗೆ ಅಸಭ್ಯವಾಗಿ ಮಾತನಾಡಿದ್ದ. ಮರುದಿನ ಈ ವಿಷಯವನ್ನು ಪತ್ನಿ ಅನುಕುಮಾರ್‌ಗೆ ತಿಳಿಸಿದ್ದು, ಕುಡಿದ ಮತ್ತಿನಲ್ಲಿ ಮಾತನಾಡಿದ್ದಾಗಿ ದೀಪಕ್ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ಈ ನಡುವೆ ದೀಪಕ್, ರಾಮನಾಥಮೋಳೆ ಗ್ರಾಮದ ಮತ್ತೊಬ್ಬ ಸ್ನೇಹಿತ ಶಿವ ಎಂಬಾತನಿಗೂ ಇದೇ ರೀತಿ ನಿಂದಿಸಿ, ದ್ವೇಷ ಕಟ್ಟಿಕೊಂಡಿದ್ದ. ಅನುಕುಮಾರ್ ಹಾಗೂ ಶಿವ ಇಬ್ಬರೂ ಜತೆಯಾಗಿ ದೀಪಕನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಸೆ.12ರಂದು ಬೆಂಗಳೂರಿನಿಂದ ಮಂಡ್ಯದ ಭೀಮನಹಳ್ಳಿಗೆ ಸೋಫಾ ಸೆಟ್ ತರಲೆಂದು ದೀಪಕ್‌ನನ್ನು ಆತನ ಗೂಡ್ಸ್ ವಾಹನದಲ್ಲಿ ಕರೆದು ಹೋಗಿದ್ದು, ಸೆ.14ರ ಸಂಜೆ ಹಿಂದಿರುಗುವ ವೇಳೆ ತಾಲೂಕಿನ ಗಾಮನಹಳ್ಳಿ ಅರಣ್ಯ ವಲಯದ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ಅನುಕುಮಾರ್ ಮತ್ತು ದೀಪಕ್ ಮದ್ಯಪಾನ ಮಾಡಿದ್ದಾರೆ. ನಂತರ ದೀಪಕ್ ಮದ್ಯದ ಅಮಲಿನಲ್ಲಿ ನಿತ್ರಾಣಗೊಂಡಿದ್ದು, ಬಳಿಕ ಅನುಕುಮಾರ್ ಶಿವುಗೆ ಕರೆಮಾಡಿ ಕರೆಸಿಕೊಂಡು, ದೀಪಕ್‌ನನ್ನು ಕೊಚ್ಚಿ ಕೊಲೆ ಮಾಡಿ, ಮೃತದೇಹವನ್ನು ಕಾವೇರಿ ನದಿಗೆ ಎಸೆದು ಪರಾರಿಯಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿಗಳ ಜತೆಗೆ ಕೊಲೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಗೂಡ್ಸ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಶಿವನ ಪತ್ತೆಗೆ ಜಾಲ ಬೀಸಲಾಗಿದೆ.