ಕಿಕ್ಕೇರಿ : ಮೈಮೇಲಿನ ಎಲ್ಲ ಗಂಟುಗಳು ಕ್ಯಾನ್ಸರ್‌ಕಾರಕ ಗಡ್ಡೆಗಳೆಂದು ಭಾವಿಸಬೇಕಾಗಿಲ್ಲ. ಆದರೆ ಉದಾಸೀನ ತೋರದೆ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಮೈಸೂರಿನ ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ. ನವೀನ್ ತಿಳಿಸಿದರು.
ಇಲ್ಲಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿಯಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಹೆಣ್ಣು ಭೂಮಿಗೆ ಹೋಲಿಕೆ ಮಾಡುವ ಪೂಜ್ಯನೀಯ ಭಾವನೆ ನಮ್ಮ ಸಂಸ್ಕೃತಿಯಲ್ಲಿದೆ. ಈಕೆಯ ಆರೋಗ್ಯ ಬಹುಮುಖ್ಯವಾಗಿದೆ. ರೋಗಮುಕ್ತರಾಗಲು ಮೊದಲು ಮಕ್ಕಳಿಗೆ ಮೊಬೈಲ್ ನೀಡದಿರಿ. ತಾಯಂದಿರು ಮಕ್ಕಳಿಗೆ ಹಾಲು ಉಣಿಸುವುದನ್ನು ಮರೆಯದಿರಿ. ಹಾಲು ಉಣಿಸುವಿಕೆಯಿಂದ ಅಂಗಸೌಷ್ಟವ ಹಾಳಾಗಲಿದೆ ಎಂಬ ತಪ್ಪು ಅಭಿಪ್ರಾಯ ಬಹುತೇಕ ಸ್ತನ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ದೇಹ ಸುಂದರ ಯಂತ್ರವಾಗಿದೆ. ಹಾರ್ಮೋನ್‌ಗಳ ವ್ಯತ್ಯಾಸದಿಂದ ಹಲವು ಬದಲಾವಣೆ ಸಹಜ. ತಡವಾಗಿ ವಿವಾಹವಾಗುವುದರಿಂದ ಹಲವು ಸಮಸ್ಯೆ ಕಾಡಾಲಿದೆ. ಗುಪ್ತಾಂಗ ಶುಚಿತ್ವದಲ್ಲಿ ಎಚ್ಚರಿಕೆ ಇರಲಿ. ಗರ್ಭಕೋಶದಲ್ಲಿ ಯಾವುದೇ ಸಣ್ಣ ಸಮಸ್ಯೆಗಳು ಕಾಡಿದರೆ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. ಸಮಸ್ಯೆಗಳು ಉಲ್ಬಣವಾಗುವ ಮುನ್ನ ಆರಂಭದಲ್ಲಿ ತಪಾಸಣೆ, ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಂತಹ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬಹುದು ಎಂದರು.
ಇದೇ ಸಂದರ್ಭದಲ್ಲಿ ಮಹಿಳೆಯರು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ವೈದ್ಯರಿಂದ ಪರಿಹಾರ ಪಡೆದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ವ ಉದ್ಯೋಗ ಉತ್ಪನ್ನಗಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಆರ್‌ಟಿಒ ಮಲ್ಲಿಕಾರ್ಜುನ್ ಒಕ್ಕೂಟದ ಅಧ್ಯಕ್ಷೆ ವಿಮಲಾ, ಜಿಲ್ಲಾ ನಿರ್ದೇಶಕಿ ಲೀಲಾವತಿ, ಮೈಸೂರು ಕಚೇರಿಯ ಯೋಜನಾಧಿಕಾರಿ ಮೂಕಾಂಬಿಕಾ, ಕಿಕ್ಕೇರಿ ಯೋಜನಾಧಿಕಾರಿ ಬಿ. ಶ್ರೀನಿವಾಸ್, ಜನಜಾಗೃತಿ ವೇದಿಕೆ ಸದಸ್ಯೆ ನಳಿನಿ, ನಾರಾಯಣಸ್ವಾಮಿ, ಶಿವರಾಮು, ಹಣಕಾಸು ಪ್ರಬಂಧಕ ಚಾಮರಾಜ, ಆಡಳಿತ ಪ್ರಬಂಧಕ ರಾಘವೇಂದ್ರ, ಮೇಲ್ವಿಚಾರಕ ದಿನೇಶ್, ರವೀಶ್, ನವೀನ್, ಪ್ರವೀಣ್, ನಂದಿನಿ, ಸಂಗೀತಾ, ಪವಿತ್ರಾ, ಯಶೋದಾ, ಚೈತ್ರಾ, ಸವಿತಾ, ಸಿಬ್ಬಂದಿ ದಾಮೋದರ್, ಶಶಿಕುಮಾರ್, ರವಿಕುಮಾರ್, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.