ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದರ್ಶನ ಪಡೆದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಜಿಲ್ಲಾಡಳಿತ ವತಿಯಿಂದ ಅಭಿನಂದಿಸಿ ನಾರಾಯಣಸ್ವಾಮಿ ವಿಗ್ರಹದ ಸ್ಮರಣಿಕೆ ನೀಡಲಾಯಿತು. ಜಿಲ್ಲಾಧಿಕಾರಿ ಡಾ.ಕುಮಾರ್, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಇತರರಿದ್ದರು. 
ಮಂಡ್ಯ

ಮೇಲುಕೋಟೆ ಅಭಿವೃದ್ಧಿಗೆ ಕೇಂದ್ರದ ಸಹಕಾರ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ

ಮೇಲುಕೋಟೆ: ರಾಮಾನುಜಾಚಾರ್ಯರ ಕರ್ಮಭೂಮಿ ಮೇಲುಕೋಟೆ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದಲೂ ಅಗತ್ಯ ಸಹಕಾರ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.

ಗುರುವಾರ ಸಂಜೆ ಮೇಲುಕೋಟೆಗೆ ಆಗಮಿಸಿ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಕೈಂಕರ್ಯಪರರು ಮತ್ತು ಶಾಸಕರ ಮನವಿ ಆಲಿಸಿ ಮಾತನಾಡಿದ ಅವರು, ವೈಷ್ಣವ ಕ್ಷೇತ್ರವಾದ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ ಮತ್ತು ರಾಮಾನುಜಾಚಾರ್ಯರ ದರ್ಶನ ಪಡೆದು ಧನ್ಯತಾ ಭಾವ ಹೊಂದಿದ್ದೇನೆ. ಭಾರತ ಸರ್ಕಾರದ ಪುರಾತತ್ವ ಇಲಾಖೆಯ ಚೆಲುವನಾರಾಯಣ ಸ್ವಾಮಿ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಈ ಸಂಬಂಧ ಪ್ರತ್ಯೇಕ ಮನವಿ ಸಲ್ಲಿಸಿ ಎಂದರು.

ಸಂಜೆ ಮೈಸೂರಿನಿಂದ ಮೇಲುಕೋಟೆಗೆ ಆಗಮಿಸಿದ ನಿರ್ಮಲಾ ಸೀತಾರಾಮನ್ ಅವರನ್ನು ದೇವಾಲಯ ವತಿಯಿಂದ ಸಾಂಪ್ರದಾಯಿಕವಾಗಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಮೇಲುಕೋಟೆ ಶಾಸಕ ದರ್ಶನ್, ಜಿಲ್ಲಾಧಿಕಾರಿ ಡಾ.ಕುಮಾರ್, ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಶ್ರೇಯಸ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪರಮೇಶಗೌಡ ಬರಮಾಡಿಕೊಂಡರು. ಚೆಲುವನಾರಾಯಣ ಸ್ವಾಮಿಗೆ ಪೂಜೆ ಸಲ್ಲಿಸಿ ರಾಮಾನುಜರ ದರ್ಶನ ಪಡೆದರು. ರಾಜಗೋಪುರದ ಬಳಿ ಯತಿರಾಜದಾಸರ್ ಗುರುಪೀಠದ ವತಿಯಿಂದ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಅಭಿನಂದಿಸಿದರು. ಇದೇ ವೇಳೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಿಶೇಷ ಅನುದಾನ ಬಿಡುಗಡೆಗೆ ಸಚಿವರನ್ನು ಕೋರಿದರು.

ಚೆಲುವನಾರಾಯಣ ಸ್ವಾಮಿ ದರ್ಶನ ಮುಗಿಸಿ ಹೊರಬಂದ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಮಂಡ್ಯ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ ಅಭಿನಂದಿಸಿ ನಾರಾಯಣಸ್ವಾಮಿ ವಿಗ್ರಹ ನೀಡಿದರು. ಸಂಸ್ಕೃತ ಸಂಶೋಧನಾ ಸಂಸ್ಥೆ ಹಾಗೂ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮಗಳು ನಡೆಯುತ್ತಿರುವ ಮಣವಾಳಮಾಮುನಿ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದರು.

------------

ಕೈಂಕರ್ಯಪರರ ಸಮಸ್ಯೆ ಆಲಿಸಿದ ಸಚಿವೆ

ದೇವಾಲಯದ ಕೈಂಕರ್ಯಪರರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಸಚಿವೆ ನಿರ್ಮಲಾ ಸೀತಾರಮನ್ ಭರವಸೆ ನೀಡಿದರು.

ಕೇಂದ್ರ ಸರ್ಕಾರದ ಅವೈಜ್ಞಾನಿಕ ನೀತಿಯಿಂದ ಮೇಲುಕೋಟೆ ದೇವಾಲಯದ 100 ಮೀಟರ್ ವ್ಯಾಪ್ತಿಯಲ್ಲಿ ಸಾವಿರಾರು ವರ್ಷದಿಂದ ವಾಸವಿರುವ ಕೈಂಕರ್ಯಪರರಿಗೆ ತೊಂದರೆಯಾಗಿದೆ. ನಮ್ಮದೇ ಜಾಗವಿದ್ದರೂ ಮನೆಕಟ್ಟಲು, ದುರಸ್ತಿಗೆ ಇಲಾಖೆ ಅವಕಾಶ ನೀಡುತ್ತಿಲ್ಲ. 100 ಮೀ ವ್ಯಾಪ್ತಿಯಲ್ಲಿ ಹೊಸಕಟ್ಟಡ ನಿರ್ಮಾಣಕ್ಕೆ ಅವಕಾಶ ಬೇಡ. ಆದರೆ, ಹಳೆಯ ಕಾಲದ ಮನೆಗಳ ದುರಸ್ತಿಗೆ ಅವಕಾಶ ಮಾಡಿಕೊಡಿ. ಇದೇ ವೇಳೆ ದೇವಾಲಯದ ಹೊರಪ್ರಕಾರದ ಸುತ್ತಲೂ ಶಿಥಿಲವಾಗಿರುವ ಸಣ್ಣಗೋಪುರಗಳ ವಿಗ್ರಹಗಳನ್ನು ಮರು ನಿರ್ಮಿಸಲು ಆದೇಶ ಮಾಡಿಸಿ ಕೊಡಿ ಎಂದು ಮನವಿ ಮಾಡಿದರು.

ಕೈಂಕರ್ಯಪರರ ಮನವಿ ಆಲಿಸಿದ ಕೇಂದ್ರ ಸಚಿವರು ಪ್ರತ್ಯೇಕವಾದ ಮನವಿಗಳನ್ನು ಕೊಡಿ. ಸಾಧ್ಯವಾದರೆ ಎಲ್ಲರೂ ಒಮ್ಮೆ ಕಚೇರಿಗೆ ಬನ್ನಿ. ಕೇಂದ್ರ ಸರ್ಕಾರ ನಿಮ್ಮ ಪರವಾಗಿದೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರು ಸಹ ನಿಮಗೆ ಎಲ್ಲ ರೀತಿಯ ಸಹಕಾರ ನೀಡುತ್ತಾರೆ ಎಂದರು.

ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್, ಪರಿಚಾರಕ ಪಾರ್ಥಸಾರಥಿ, ಸ್ಥಾನೀಕಂ ಮುಕುಂದನ್ ಪ್ರಸನ್ನಕುಮಾರ್, ರಾಮಾನುಜರ ಸನ್ನಿಧಿ ಅರ್ಚಕ ವಿದ್ವಾನ್ ಆನಂದಾಳ್ವಾರ್, ಸ್ವಾಮಿ ಸನ್ನಿಧಿ ಅರ್ಚಕ ವರದರಾಜ ಭಟ್ಟರ್, ಅಮ್ಮನವರ ಸನ್ನಿಧಿ ಅರ್ಚಕ ನಾರಾಯಣಭಟ್ಟರ್, ಅರೈಯರ್ ಪಾರ್ಥಸಾರತಿ, ರಾಮಸ್ವಾಮಿ ಅಯ್ಯಂಗಾರ್ ಇದ್ದರು.