ಅಂತರವಳ್ಳಿ ಬಳಿಯಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಎಚ್.ಜಿ.ಶ್ರೀನಿವಾಸ್ ಉದ್ಘಾಟಿಸಿದರು. 
ಮಂಡ್ಯ

ಮೂಲದಲ್ಲಿಯೇ ಕಸ ವಿಂಗಡಿಸಿ ನೀಡಿ

ತಾಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಮನವಿ

ಹಲಗೂರು: ಸ್ವಯಂಪ್ರೇರಿತ ಸೇವಾ ಮನೋಭಾವ ಉತ್ತೇಜಿಸುವುದು, ಸಾರ್ವಜನಿಕರ ಸಹಭಾಗಿತ್ವದ ಮೂಲಕ ಸಾಮೂಹಿಕ ಸ್ವಚ್ಛತಾ ಚಟುವಟಿಕೆಗಳನ್ನು ಬಲಪಡಿಸುವುದು ಸ್ವಚ್ಚತಾ ಸೇವಾ ಅಭಿಯಾನದ ಪ್ರಮುಖ ಉದ್ದೇಶ ಎಂದು ತಾಲೂಕು ಪಂಚಾಯಿತಿ ಇಒ ಎಚ್.ಜಿ.ಶ್ರೀನಿವಾಸ್ ಹೇಳಿದರು.

ಮಳವಳ್ಳಿ ತಾಲೂಕು ಪಂಚಾಯಿತಿ ಮತ್ತು ಯತ್ತಂಬಾಡಿ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಸಮೀಪದ ಅಂತರವಳ್ಳಿ ಬಳಿಯಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಸ್ವಚ್ಚತಾ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಸುತ್ತಲಿನ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಹಾಕದೆ ಮೂಲದಲ್ಲಿಯೇ ವಿಂಗಡಿಸಿ ಸ್ವಚ್ಛತಾ ಕಾರ್ಮಿಕರಿಗೆ ಹಸ್ತಾಂತರಿಸಿದಲ್ಲಿ, ವೈಜ್ಞಾನಿಕವಾಗಿ ನಿರ್ವಹಿಸಿ ವಿಲೇವಾರಿ ಮಾಡಲು ಸಾಧ್ಯ ಎಂದು ಹೇಳಿದರು,

ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೃಷ್ಣಮೂರ್ತಿ ಮಾತನಾಡಿ, ಮನುಷ್ಯನ ಆರೋಗ್ಯ ಅವನ ಸ್ವಚ್ಛತೆಯಲ್ಲಿ ಅಡಗಿದೆ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಅನ್ನು ನಿಷೇಧಿಸಬೇಕು. ಆಗ ಮಾತ್ರ ನಮ್ಮ ಆರೋಗ್ಯ ಸುಂದರವಾಗಿರುತ್ತದೆ. ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ರಂಗೋಲಿ ಸ್ಪರ್ಧೆ ಆಯೋಜಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಬಳಿಕ ಅಂತರವಳ್ಳಿ ಸಿದ್ದೇಶ್ವರ ದೇವಸ್ಥಾನದವರೆಗೆ ಸ್ವಚ್ಛತಾ ಜಾಗೃತಿ ಜಾಥಾ ನಡೆಯಿತು. ನಂತರ ದೇವಸ್ಥಾನದ ಆವರಣದಲ್ಲಿ ಶ್ರಮದಾನ ನಡೆಯಿತು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಸಂಯೋಜಕರಾದ ಚನ್ನೇಗೌಡ, ತಮ್ಮಣ್ಣ, ಶಿವಕುಮಾರ್, ಸಂಜೀವಿನಿ ತಾಲೂಕು ವ್ಯವಸ್ಥಾಪಕ ಮಹದೇವಸ್ವಾಮಿ, ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಪುಟ್ಟಸ್ವಾಮಿ, ಸಿಬ್ಬಂದಿ ಶ್ರೀಧರ್, ಕುಮಾರ, ಸಿದ್ದಪ್ಪ ಇತರರಿದ್ದರು.