ಚಿರತೆ  
ಮಂಡ್ಯ

ಮಾರ್ಗೋನಹಳ್ಳಿಯಲ್ಲಿ ಚಿರತೆ ದಾಳಿಗೆ ಹಸು-ಕರು ಬಲಿ

ಕುತ್ತಿಗೆ ಸೀಳಿ ಕೊಂದು ರಕ್ತ ಹೀರಿ ಪರಾರಿಯಾಗಿದೆ

ಕಿಕ್ಕೇರಿ: ಹೋಬಳಿಯ ಮಾರ್ಗೋನಹಳ್ಳಿ ಗ್ರಾಮದ ರೈತ ಜಯರಾಂ ಸಾಕಿದ್ದ ಹಸುವಿನ ಕರು ಚಿರತೆ ದಾಳಿಗೆ ಮಂಗಳವಾರ ಮುಂಜಾನೆ ಬಲಿಯಾಗಿವೆ.

ಕುಮಾರ್ ಗ್ರಾಮದ ಹೊರವಲಯದಲ್ಲಿರುವ ಜಮೀನಿನಲ್ಲಿ ತೋಟದ ಮನೆ ನಿರ್ಮಿಸಿಕೊಂಡು ಜಾನುವಾರು, ಆಡು-ಕುರಿಗಳನ್ನು ಸಾಕಿಕೊಂಡಿದ್ದರು. ಎಂದಿನಂತೆ ರಾತ್ರಿ ವೇಳೆ ಹಸು-ಕರುಗಳನ್ನು ತೋಟದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದರು. ಮುಂಜಾನೆ ಚಿರತೆ ಕೊಟ್ಟಿಗೆಗೆ ನುಗ್ಗಿ ಹಸು, ಕರುವಿನ ಮೇಲೆ ದಾಳಿ ಮಾಡಿದೆ. ಕುತ್ತಿಗೆ ಸೀಳಿ ಕೊಂದು ರಕ್ತ ಹೀರಿ ಪರಾರಿಯಾಗಿದೆ.

ಕಳೆದ ಮೂರು ದಿನಗಳ ಹಿಂದೆ ಇದೇ ಗ್ರಾಮದ ರೈತ ರಾಮದಾಸ್ ತಮ್ಮ ತೋಟದಲ್ಲಿ ಎರಡು ಆಡು ಮೇಯಿಸುತ್ತಿದ್ದಾಗ ಚಿರತೆ ದಾಳಿ ಮಾಡಿ ಒಂದು ಆಡನ್ನು ಸ್ಥಳದಲ್ಲಿಯೇ ಕೊಂದು ಹಾಕಿತ್ತು. ಮತ್ತೊಂದು ಆಡಿನ ಮೇಲೆ ದಾಳಿ ಮಾಡಿತ್ತು. ಇತ್ತೀಚೆಗೆ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಆಗಿಂದಾಗ್ಗೆ ಕಾಣಿಸಿಕೊಳ್ಳುತ್ತಿದ್ದು, ಕುರಿ, ಆಡು, ಜಾನುವಾರು, ಸಾಕುನಾಯಿಗಳನ್ನು ಕೊಂದು ಹಾಕಿದೆ. ರೈತರು ಜಾನುವಾರುಗಳನ್ನು ಸಾಕಲು, ಒಂಟಿಯಾಗಿ ಓಡಾಡಲು ಆತಂಕಪಡುವಂತಾಗಿದೆ.

ಸಂಬಂಧಪಟ್ಟ ಸಾಮಾಜಿಕ ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯಲು ಬೋನಿನ ವ್ಯವಸ್ಥೆ ಮಾಡಲು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸ್ಥಳಕ್ಕೆ ಸಾಮಾಜಿಕ ಆರಣ್ಯ ಇಲಾಖೆ ಹಾಗೂ ಪಶು ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿದರು.