ಮಳವಳ್ಳಿ ತಾಲೂಕಿನ ಮಾದಹಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಶುಕ್ರವಾರ ಪತ್ತೆಯಾದ ಎರಡು ಚಿರತೆ ಮರಿಗಳನ್ನು ಗ್ರಾಮಸ್ಥರು ಹಿಡಿದು ಕೋಳಿ ಪಂಜರದಲ್ಲಿ ಕೂಡಿಹಾಕಿ ಅರಣ್ಯ ಇಲಾಖೆಗೆ ರೈತರು ಒಪ್ಪಿಸಿದರು.  
ಮಂಡ್ಯ

ಮಾದಹಳ್ಳಿಯಲ್ಲಿ ಎರಡು ಚಿರತೆ ಮರಿಗಳ ರಕ್ಷಣೆ

ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮರಿ ಪತ್ತೆ

ಮಳವಳ್ಳಿ : ತಾಲೂಕಿನ ಮಾದಹಳ್ಳಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಮೂರು ಚಿರತೆ ಮರಿಗಳು ಶುಕ್ರವಾರ ಪತ್ತೆಯಾಗಿದ್ದು, ಎರಡು ಮರಿಗಳನ್ನು ಗ್ರಾಮಸ್ಥರೇ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮದ ಉಮೇಶ್ ಎಂಬುವರ ಕಬ್ಬಿನ ಗದ್ದೆಯಲ್ಲಿ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ. ಮರಿಗಳನ್ನು ಕಂಡ ಗ್ರಾಮಸ್ಥರು ಹಿಡಿಯಲು ಯತ್ನಿಸಿದಾಗ ಒಂದು ಮರಿ ಕಬ್ಬಿನ ಗದ್ದೆಯೊಳಗೆ ತಪ್ಪಿಸಿಕೊಂಡಿದ್ದು, ಎರಡು ಮರಿಗಳನ್ನು ಹಿಡಿದು ಕೋಳಿ ಪಂಜರದಲ್ಲಿ ಕೂಡಿಹಾಕಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್ ಮರಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಕ್ಕಿರುವ ಮರಿಗಳು ಸುಮಾರು ಮೂರು ತಿಂಗಳ ಪ್ರಾಯದ್ದಾಗಿದ್ದು, ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು ಮರಿಯಾಗಿದೆ.

ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಮರಿಗಳನ್ನು ಕಾವೇರಿ ವನ್ಯಜೀವಿ ವಲಯಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಶ್ರೀಧರ್ ತಿಳಿಸಿದರು.

ಗ್ರಾಮದ ಪಕ್ಕದಲ್ಲೇ ಇರುವ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಸಿಕ್ಕಿದ್ದು, ಒಂದು ಮರಿ ತಪ್ಪಿಸಿಕೊಂಡಿರುವುದರಿಂದ ತಾಯಿ ಚಿರತೆ ಈ ಭಾಗದಲ್ಲೇ ಇರಬಹುದೆಂಬ ಆತಂಕ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಶೀಘ್ರದಲ್ಲಿ ಚಿರತೆ ಹಾಗೂ ಮತ್ತೊಂದು ಮರಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.