ಮಳವಳ್ಳಿ: ಪಟ್ಟಣದ ತಾಲೂಕು ಆಡಳಿತ ಕಚೇರಿ, ಪುರಸಭೆ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲೂಕು ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಡಾ. ವಿ.ಎಸ್.ಲೋಕೇಶ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಾಮಾಯಣದ ಮೂಲಕ ಮಾನವ ಕುಲಕ್ಕೆ ಸತ್ಯ, ಧರ್ಮ, ತ್ಯಾಗದ ಮಹತ್ವವನ್ನು ಸಾರಿದ ಮಹಾನ್ ಋಷಿ. ಅವರ ಆದರ್ಶಗಳು, ಬದುಕಿನ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದ್ದು, ವಾಲ್ಮೀಕಿ ಅವರ ಜೀವನ ಚರಿತ್ರೆಯನ್ನು ಯುವ ಪೀಳಿಗೆ ಅರಿತು ಅವರ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ಸಂತೋಷ್, ಬಿಇಒ ಉಮಾ ತಾಲೂಕು ಕಚೇರಿಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಪುರಸಭೆ ಕಚೇರಿಯಲ್ಲಿ ಆಚರಣೆ: ಪುರಸಭೆ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ನಾಗರತ್ನಾ ಅವರು ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಶೋಷಿತ ವರ್ಗದಿಂದ ಬಂದು ಜ್ಞಾನದ ಮೂಲಕ ಮಹರ್ಷಿ ಸ್ಥಾನಕ್ಕೇರಿದವರು. ಸಮಾಜದಲ್ಲಿ ಸಮಾನತೆ, ಸಹೋದರತೆಯನ್ನು ಅವರು ಪ್ರತಿಪಾದಿಸಿದರು. ಅವರ ತತ್ವಾದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಹಲವು ಪೌರಕಾರ್ಮಿಕರು ಉಪಸ್ಥಿತರಿದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಆಚರಣೆ: ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು ಅವರು ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ನಮನ ಸಲ್ಲಿಸಿದರು. ಬಳಿಕ ಅವರು ಮಾತನಾಡಿ, ವಾಲ್ಮೀಕಿ ಮಹರ್ಷಿ ಅವರು ಭಾರತೀಯ ಸಂಸ್ಕೃತಿಯ ಪ್ರತೀಕ. ಅವರು ಬರೆದ ರಾಮಾಯಣ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಕಾಂಗ್ರೆಸ್ ಪಕ್ಷವು ಯಾವಾಗಲೂ ದಮನಿತ ವರ್ಗಗಳ ಏಳಿಗೆಗಾಗಿ ಶ್ರಮಿಸುತ್ತಿದ್ದು, ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಕಲ್ಕುಣಿ ದೇವರಾಜು, ಮುಖಂಡರಾದ ವೆಂಕಟೇಶ್, ಚಿಕ್ಕಬಸವರಾಜು, ಆನಂದ, ರುದ್ರೇಶ್, ನಾಗೇಂದ್ರ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.