ಮಳವಳ್ಳಿ: ಪಟ್ಟಣ ಸೇರಿದಂತೆ ತಾಲೂಕಿನ ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿ, ಶಾಲಾ-ಕಾಲೇಜುಗಳು ಹಾಗೂ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಶುಕ್ರವಾರ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಲೋಕೇಶ್, ಪುರಸಭೆಯಲ್ಲಿ ಮುಖ್ಯಾಧಿಕಾರಿ ನಾಗರತ್ನಾ, ತಾಪಂ ಕಚೇರಿಯಲ್ಲಿ ಇಒ ಶ್ರೀನಿವಾಸ್ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಹನುಮಂತು, ಮಹಾತ್ಮ ಗಾಂಧಿ ಸತ್ಯ, ಅಹಿಂಸೆ, ಸ್ವಾವಲಂಬನೆಯ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕ. ಇಂದು ರಾಜಕೀಯದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಗಾಂಧಿ ಅವರ ಆದರ್ಶಗಳನ್ನು ಪ್ರತಿಯೊಬ್ಬ ಕಾರ್ಯಕರ್ತರು, ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡಲು ಜೆಡಿಎಸ್ ಬದ್ಧವಾಗಿದೆ ಎಂದು ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ನಂದಕುಮಾರ್, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ತಾಲೂಕು ಯುವ ಘಟಕದ ಅಧ್ಯಕ್ಷ ಚಂದಳ್ಳಿ ಶ್ರೀಧರ, ಎಸ್‌ಸಿ, ಎಸ್‌ಟಿ ಅಧ್ಯಕ್ಷ ಬೆಳಕವಾಡಿ ಕಾಂತರಾಜು, ಟೌನ್ ಅಧ್ಯಕ್ಷ ಪ್ರಭು, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.
ಪೌರಕಾರ್ಮಿಕರೇ ನಿಜವಾದ ಸ್ವಚ್ಛತಾ ರಾಯಭಾರಿಗಳು: ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ಆರ್.ಜಿ.ಮಹದೇವಸ್ವಾಮಿ ಮಾತನಾಡಿ, ಗಾಂಧಿ ಅವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಅವರ ಕನಸಿನ ಸ್ವಚ್ಛ ಭಾರತವನ್ನು ನನಸು ಮಾಡುತ್ತಿರುವವರು ಪೌರಕಾರ್ಮಿಕರು. ಅವರು ನಿಜವಾದ ಸ್ವಚ್ಛತಾ ರಾಯಭಾರಿಗಳು. ಅವರ ಸೇವೆಯನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಗಾಂಧಿ ಹಾಗೂ ಶಾಸ್ತ್ರಿ ಅವರ ಸರಳತೆ, ಪ್ರಾಮಾಣಿಕತೆ, ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷ ಮೊಹಮದ್ ಜಬೀವುಲ್ಲಾ, ಸುರೇಶ್, ಪ್ರಕಾಶ್, ಘನಶ್ಯಾಮ್, ಮಧು ಸೇರಿದಂತೆ ಇತರರು ಉಪಸ್ಥಿತರಿದ್ದರು.