ಮದ್ದೂರು ನಗರದ ತಾಲೂಕು ಕಚೇರಿ ಬಳಿ ನೂತನವಾಗಿ 1.7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಾಲೂಕು ಪಂಚಾಯಿತಿಯ ಅಂಗಡಿ-ಮಳಿಗೆಗಳ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಶಂಕರೇಗೌಡ, ಅಮೂಲ್ಯಾ, ಮರಿದೇವರು, ರಾಘವ್, ಪ್ರಸನ್ನಕುಮಾರ್, ಸಿದ್ದರಾಜು, ರಾಮಲಿಂಗಯ್ಯ ಇದ್ದರು. 
ಮಂಡ್ಯ

ಮದ್ದೂರು ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಕೈ ಅಧಿಕಾರಕ್ಕೆ

ಶಾಸಕ ಕೆ. ಎಂ. ಉದಯ್ ವಿಶ್ವಾಸ

ಮದ್ದೂರು: ಅ.9ರಂದು ನಡೆಯಲಿರುವ ಮದ್ದೂರು ಟಿಎಪಿಸಿಎಂಎಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಹಿಡಿಯಲಿದೆ ಎಂದು ಶಾಸಕ ಕೆ. ಎಂ. ಉದಯ್ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ತಾಲೂಕು ಕಚೇರಿ ಬಳಿ ನೂತನವಾಗಿ 1.7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಾಲೂಕು ಪಂಚಾಯತಿಯ ಅಂಗಡಿ-ಮಳಿಗೆಗಳ ಕಟ್ಟಡ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹಲವು ದಶಕಗಳಿಂದ ಹಳೆಯದಾಗಿದ್ದ ತಾಪಂಗೆ ಸೇರಿದ ಅಂಗಡಿ ಮಳಿಗೆಗಳನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡುವುದರಿಂದ ತಾ.ಪಂಗೆ ಆದಾಯ ಕೂಡಾ ಬರಲಿದ್ದು ವ್ಯಾಪಾರಸ್ಥರಿಗೂ ಅನುಕೂಲವಾಗಲಿದೆ ಎಂದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಆಡಳಿತವನ್ನು ಸಹಿಸಿಕೊಳ್ಳದೆ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿರುವುದನ್ನು ಅರಗಿಸಿಕೊಳ್ಳಲಾಗದೆ ಬಿಡದಿ, ನೈಸ್ ಹೋರಾಟ ಎಂದು ಅಲೆಯುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಶಾಸಕ ಕೆ. ಎಂ.ಉದಯ್ ಕುಟುಕಿದರು.

ನೈಸ್ ರಸ್ತೆ ವಿಷಯವಾಗಿ ಕೇಂದ್ರ ಸಚಿವ ಆರಂಭಿಸಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಸ್ತಿಗಳ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು ಮೊದಲು ಅವರಿಗೆ ಎಷ್ಟು ಆಸ್ತಿಯಿದೆ. ಇಷ್ಟೆಲ್ಲಾ ಆಸ್ತಿ ಹೇಗೆ ಬಂತು ಎಂಬುದನ್ನೂ ಜನರಿಗೆ ಹೇಳಲಿ ಎಂದ ಅವರು, ಸುಮಾರು 40 ವರ್ಷಗಳಿಂದ ಹಲವು ವ್ಯಾಪಾರ ವ್ಯವಹಾರಗಳನ್ನು ಹಿಂದಿನಿಂದಲೂ ಡಿ.ಕೆ.ಶಿವಕುಮಾರ್ ಮಾಡಿಕೊಂಡು ಆಸ್ತಿ ಸಂಪಾದನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ 1400 ಕೋಟಿ ರೂ. ಅಸ್ತಿ ಘೋಷಣೆಯನ್ನೂ ಮಾಡಿಕೊಂಡಿದ್ದಾರೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್‌ನ ಮಹಿಳಾಧ್ಯಕ್ಷೆ ಮಮತಾ ಶಂಕರೇಗೌಡ, ಟಿಎಪಿಸಿಎಂಎಸ್‌ನ ನಿರ್ದೇಶಕರಾದ ಅಮೂಲ್ಯಾ, ಮರಿದೇವರು, ರಾಘವ್, ಮುಖಂಡರಾದ ಆರಿಫ್, ಇನಾಯತ್ ಖಾನ್, ಮಹದೇವಯ್ಯ, ನಟರಾಜು, ನಗರಸಭೆ ಮಾಜಿ ಸದಸ್ಯರಾದ ಪ್ರಸನ್ನ, ಸಿದ್ದರಾಜು, ತಾಪಂ ಇಓ ರಾಮಲಿಂಗಯ್ಯ ಸೇರಿದಂತೆ ಇತರರು ಇದ್ದರು.

ಮದ್ದೂರು ನಗರದ ತಾಲೂಕು ಕಚೇರಿ ಬಳಿ ನೂತನವಾಗಿ 1.7 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಾಲೂಕು ಪಂಚಾಯಿತಿಯ ಅಂಗಡಿ-ಮಳಿಗೆಗಳ ಕಟ್ಟಡ ಕಾಮಗಾರಿಗೆ ಶಾಸಕ ಕೆ.ಎಂ.ಉದಯ್ ಭೂಮಿಪೂಜೆ ನೆರವೇರಿಸಿದರು. ಶಂಕರೇಗೌಡ, ಅಮೂಲ್ಯಾ, ಮರಿದೇವರು, ರಾಘವ್, ಪ್ರಸನ್ನಕುಮಾರ್, ಸಿದ್ದರಾಜು, ರಾಮಲಿಂಗಯ್ಯ ಇದ್ದರು.