ಕೆ.ಎಂ.ದೊಡ್ಡಿ: ಸಮೀಪದ ಅಣ್ಣೂರು ಗ್ರಾಮದ ಪುಟ್ಟಕಟ್ಟೆ ಸಮೀಪದ ನಾಗರಕಲ್ಲು ಬಳಿಯ ಅರಳಿ ಮರದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಾಗಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನಾರೋಗ್ಯ ಉಂಟಾಗುತ್ತಿದ್ದ ಪರಿಣಾಮ ಮರದ ರೆಂಬೆಗಳನ್ನು ಕತ್ತರಿಸಲಾಗಿದೆ.
ಅಂಗನವಾಡಿ ಕೇಂದ್ರಕ್ಕೆ ಸುಮಾರು 25 ಮಕ್ಕಳು ಆಗಮಿಸುತ್ತಿದ್ದು, ಪಕ್ಷಿಗಳ ಹಿಕ್ಕೆ ಹಾಗೂ ಇತರ ಕಲುಷಿತ ವಸ್ತುಗಳಿಂದ ಮಕ್ಕಳಿಗೆ ಜ್ವರ, ಕೆಮ್ಮು ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿತ್ತು. ಅಲ್ಲದೆ ಅಕ್ಕಪಕ್ಕದ ಮನೆಗಳ ನಿವಾಸಿಗಳಲ್ಲೂ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವ ಕುರಿತು ಗ್ರಾಮ ಪಂಚಾಯಿತಿ ಪಿಡಿಒ ಹರೀಶ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಈ ನಡುವೆ ಮಕ್ಕಳ ಆರೋಗ್ಯದ ಬಗ್ಗೆ ಆತಂಕಗೊಂಡ ಪಾಲಕರು ಒಂದು ವಾರ ಅಂಗನವಾಡಿಗೆ ಕಳುಹಿಸಿಲ್ಲ. ಅಲ್ಲದೆ ಮರದ ರೆಂಬೆಗಳನ್ನು ತೆರವುಗೊಳಿಸಿದ ಬಳಿಕವೇ ಮಕ್ಕಳನ್ನು ಕಳುಹಿಸುವುದಾಗಿ ತಿಳಿಸಿದ್ದರು. ಈ ಸಂಬಂಧ ಅಂಗನವಾಡಿ ಕಾರ್ಯಕರ್ತೆ ರೇಣುಕಾ ಪಿಡಿಒ ಹರೀಶ್ ಅವರಿಗೆ ಮನವಿ ಸಲ್ಲಿಸಿದ್ದರು.
ಮನವಿ ಸ್ವೀಕರಿಸಿದ ಪಿಡಿಒ ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ, ಅಕ್ಕಪಕ್ಕದ ನಿವಾಸಿಗಳ ಆರೋಗ್ಯ ಸಮಸ್ಯೆ ಕುರಿತು ಮಾಹಿತಿ ಪಡೆದರು. ಬಳಿಕ ಮಾತನಾಡಿದ ಅವರು, ಅಂಗನವಾಡಿ ಮಕ್ಕಳು ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಆರೋಗ್ಯ ಸಮಸ್ಯೆಯಾಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮರದ ರೆಂಬೆಗಳನ್ನು ತೆರವುಗೊಳಿಸಲಾಗಿದೆ ಎಂದು ಹರೀಶ್ ತಿಳಿಸಿದರು.
ಸ್ಥಳೀಯರಾದ ದೊರೆಸ್ವಾಮಿ, ರಾಘವೇಂದ್ರ, ಜಯಸ್ವಾಮಿ, ಅಜಿತ್, ಭಾಗ್ಯಮ್ಮ, ಸುಧಾ, ಲಕ್ಷ್ಮಮ್ಮ, ವಸಂತಮ್ಮ, ದೀಪು, ಜಯಂತ್, ಪುರುಷೋತ್ತಮ ಇತರರಿದ್ದರು.