ನಾಗಮಂಗಲ: ಭಾಷೆಯು ಭಾವಾಭಿವ್ಯಕ್ತಿಯ ಸಾಧನವಾಗಿದ್ದು, ಸಂಗೀತದ ಸಾಂಗತ್ಯವೇ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿಯಾಗಿದ್ದು ಮುಂದಿನ ಪೀಳಿಗೆಗೂ ತಲುಪಿಸುವ ಮಾಧ್ಯಮವಾಗಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ವತಿಯಿಂದ ಬಿಜಿ ನಗರದ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ಶತಮಾನೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇಂದು ಇಷ್ಟು ವೈಭವಯುತವಾಗಿ ಕನ್ನಡ ರಾಜ್ಯೋತ್ಸವ ಸಾಕಾರಗೊಳ್ಳಲು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕೃಪೆ ಇದೆ. ಇಂದಿನ ಈ ಕಾರ್ಯಕ್ರಮದ ಯಶಸ್ಸಿಗೆ ಕನ್ನಡದ ಅಭಿಮಾನದ ಜತೆಗೆ ನಿಮ್ಮ ಶಿಸ್ತು ಸಂಯಮವೇ ಕಾರಣ. ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪಾಲಕರು ಬಡವರಿದ್ದಾರೆ. ಅವರಲ್ಲಿ ನಿಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಭರವಸೆಯನ್ನು ಹೊತ್ತ ಶ್ರಮವಿದೆ. ವ್ಯಾಸಂಗ ಅವಧಿಯಲ್ಲಿನ ನಿಮ್ಮ ಪರಿಶ್ರಮವೂ ಬೆರೆತರೆ ಗ್ರಾಫೈಟ್ ವಜ್ರವಾಗುವಂತೆ ನಿಮ್ಮ ಬದುಕು ಸಾರ್ಥಕವಾಗುತ್ತದೆ. ಕೃತಕ ಬುದ್ಧಿಮತ್ತೆಯಂತಹ ಯಾವುದೇ ಯುಗದಲ್ಲೂ ಸಂಗೀತ ಸಾಹಿತ್ಯಕ್ಕೆ ಅಳಿವಿಲ್ಲ. ತಾಯಿ ಭಾಷೆಯ ಪಾಂಡಿತ್ಯವುಳ್ಳವನು ಸಾಧಕನಾಗುತ್ತಾನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಹಾಗೂ ಗಾಯಕ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಯಾವ ಜನ್ಮದ ಪುಣ್ಯವೋ ಏನೋ ಈ ಜನ್ಮದಲ್ಲಿ ಶ್ರೀಕ್ಷೇತ್ರದ ಒಡನಾಟವನ್ನು ಹೊಂದಿದ್ದೇನೆ. ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರು 1982ರಲ್ಲಿ ನನ್ನ ಪ್ರಥಮ ಧ್ವನಿಸುರುಳಿಯನ್ನು ಅಮೆರಿಕಾದ ಮಿಚಿಗನ್ ನಗರದಲ್ಲಿ ಬಿಡುಗಡೆ ಮಾಡಿಸಿದರು. ಅಖಂಡ 70 ದಿನಗಳ ಅಮೆರಿಕ ಪ್ರವಾಸಾನುಭವ ಜೀವನ ಪೂರ್ತಿ ಸ್ಮರಣೀಯ ಎಂದರು.
ಇಂದು ಶಿಕ್ಷಣ ಕಾಶಿಯಂತೆ ಕಂಗೊಳಿಸುವ ಬಿಜಿ ನಗರವು ಅಂದು ಕೇವಲ ಪಾಳು ಮೈದಾನವಾಗಿತ್ತು ಎಂಬುದನ್ನು ನೆನಪಿಸಿಕೊಂಡರು. ಶ್ರೀಗಳ ಉತ್ತರಾಧಿಕಾರಿಯಾಗಿ ಶ್ರೀಮಠದ ಶ್ರೇಯಸ್ಸು ಉತ್ತುಂಗಕ್ಕೆ ಕಾರಣರಾದ ಜ್ಞಾನಿ, ವಿಜ್ಞಾನಿ, ತಂತ್ರಜ್ಞಾನಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರ ಕಾರ್ಯ ತತ್ಪರತೆಯನ್ನು ಹೊಗಳಿದರು.
ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಗೆ ಶತಮಾನ ತುಂಬಿದ್ದು ಮುಂದಿನ ತಿಂಗಳು ಬೆಂಗಳೂರಿನಲ್ಲಿ ಸುಗಮ ಸಂಗೀತ ಶತಮಾನೋತ್ಸವ ಆಚರಿಸಲಾಗುತ್ತಿದೆ ಎಂದರು.
ಶ್ರೀಗಳ ಸಂಕಲ್ಪದಲ್ಲಿ ಈ ಕ್ಷೇತ್ರ ಇನ್ನಷ್ಟು ಉಜ್ವಲವಾಗಿ ಪ್ರಜ್ವಲಗೊಳ್ಳಲಿ ಎಂದು ಹರಸಿದರು.
ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ, ಖ್ಯಾತ ಗಾಯಕ ಡಾ.ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ನಾನು ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದೇನೆ. ಶ್ರೀಬಾಲಗಂಗಾಧರನಾಥ ಸ್ವಾಮೀಜಿ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದಲ್ಲಿ ಬೆಳೆದು ಇಂದು ಅತಿಥಿಯಾಗಿ ಆಹ್ವಾನಿತನಾಗಿದ್ದೇನೆ. ಸ್ವಾಮೀಜಿ ಅವರು ಅನುಮತಿ ನೀಡಿದರೆ ವಿಶ್ವವಿದ್ಯಾಲಯದ ಆಸಕ್ತ ವಿದ್ಯಾರ್ಥಿಗಳನ್ನು ತರಬೇತುಗೊಳಿಸಿ ಇದೇ ಸಭಾಂಗಣದಲ್ಲಿ ಬೃಹತ್ ಕಾರ್ಯಕ್ರಮ ನೀಡುವ ಉತ್ಸಾಹವನ್ನು ವ್ಯಕ್ತಪಡಿಸಿದರು.
ಕನ್ನಡ ಪ್ರಾಧ್ಯಾಪಕ ಡಾ.ಟಿ.ಎನ್.ವಾಸುದೇವಮೂರ್ತಿ ಅನುವಾದಿಸಿರುವ ’ಝರತುಷ್ಟ್ರನ ವಚನಗಳು’ ಮತ್ತು ಡಾಕ್ಟ್ರು ಕನ್ನಡ’ ಎಂಬ ಎರಡು ಪುಸ್ತಕಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಕನ್ನಡ ನಾಡು-ನುಡಿ ಸಂಬಂಧಿಸಿದ ನೃತ್ಯ ಪ್ರದರ್ಶನಗೊಂಡವು.
ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಶ್ರೀಧರ್, ಕುಲಸಚಿವ ಎಲ್ ಶ್ರೀಹರ್ಷ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಶಿವಕುಮಾರ್, ವಿಶ್ವವಿದ್ಯಾಲಯದ ಡೀನ್ಗಳು, ಸಾಂಸ್ಥಿಕ ಕಾಲೇಜುಗಳ ಪ್ರಾಂಶುಪಾಲರು, ಅಧಿಕಾರಿಗಳು ಸೇರಿದಂತೆ ಮತ್ತಿತರಿದ್ದರು.