ಕಿಕ್ಕೇರಿ: ಕವಿ ಹೆಸರಿನಲ್ಲಿನ ದೇಶದ ಪ್ರಥಮ ಸರೋವರವಾಗಿ ಕಿಕ್ಕೇರಿಯ ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಹೆಸರಿನಲ್ಲಿ ಲೋಕಾರ್ಪಣೆ ಮಾಡುವ ಸೌಭಾಗ್ಯ ತನಗೆ ಒದಗಿರುವುದನ್ನು ಎಂದೂ ಮರೆಯಲಾರೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಸರ್ಕಾರಿ ಸ್ವಾಮ್ಯದ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಕೆಎಸ್‌ನ ಅವರಿಗೆ ಕಾವ್ಯಸ್ಫೂರ್ತಿಯಾಗಿದ್ದ ಕಿಕ್ಕೇರಿಯ ಅಶ್ವಥಕಟ್ಟೆ ಆವರಣದಲ್ಲಿ ಶುಕ್ರವಾರ ಕೆ.ಎಸ್.ನರಸಿಂಹಸ್ವಾಮಿ ಸರೋವರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಹೆಮ್ಮೆಯ ಮೈಸೂರು ಮಲ್ಲಿಗೆ ಕವಿ ಕೆಎಸ್‌ನ ಪ್ರಪಂಚದ ಮೂಲೆ ಮೂಲೆಗೂ ಕನ್ನಡದ ಕಂಪು, ಪರಿಮಳವನ್ನು ತಮ್ಮ ಕಾವ್ಯಸುಧೆ ಮೂಲಕ ಪಸರಿಸಿದವರು. ಸೂರ್ಯ-ಚಂದ್ರ ಇರುವ ತನಕ ಕವಿ ಕಾವ್ಯ ಉಳಿಯಲಿವೆ. ‘ಮೈಸೂರ ಮಲ್ಲಿಗೆ’ ಕೃತಿ 36ಕ್ಕೂ ಹೆಚ್ಚು ಮರುಮುದ್ರಣ ಕಂಡ ಕಾವ್ಯಮಲ್ಲಿಗೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು ಕವಿ ಕೆಎಸ್‌ನ ಅವರಿಗೆ ನೀಡಿರುವುದು ಇಡೀ ಮಂಡ್ಯ ಜಿಲ್ಲೆಗೆ ಸಂದ ಗೌರವವಾಗಿದೆ ಎಂದರು.
ಕವಿ ಹೆಸರಿನಲ್ಲಿ ಅಪಸ್ವರ ಬೇಡ: ಸರೋವರ ಅಭಿವೃದ್ಧಿಗಾಗಿ 10 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು. ರಾಷ್ಟ್ರ ಪ್ರಶಸ್ತಿ ಪಡೆದ ಕವಿ ನಮ್ಮ ಜಿಲ್ಲೆಯ ಅನರ್ಘ್ಯ ರತ್ನ ಎನ್ನುವ ಖುಷಿ ನಮಗಿದೆ. ಕಿಕ್ಕೇರಿಗೆ ಕೆಎಸ್‌ನ ಏನು ಮಾಡಿದ್ದಾರೆ ಎನ್ನುವ ಕೊಂಕು ಬೇಡ. ಇವರ ಕಾವ್ಯ ಸಂಪತ್ತೇ ಕಿಕ್ಕೇರಿಗೆ ಬಲುದೊಡ್ಡ ಐಸಿರಿ. ನಾನು ಕಾಲೇಜು ದಿನಗಳಲ್ಲಿ ಕೆಎಸ್‌ನ ಅವರ ‘ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ...,‘ ‘ಅಂತಿಂಥ ಹೆಣ್ಣು ನೀನಲ್ಲ...’ ಮತ್ತಿತರ ಗೀತೆಗಳನ್ನು ಗುನುಗುತ್ತ ಸಂತಸಪಡುತ್ತಿದೆ. ಇಂತಹ ಮಹಾನ್ ಕವಿ ಹೆಸರಿನಲ್ಲಿ ಸರೋವರವನ್ನು ಲೋಕಾರ್ಪಣೆ ಮಾಡುವ ಸುದೈವ ನನ್ನದಾಗಿದೆ. ಕವಿಯ ಆತ್ಮ, ಜೀವಾತ್ಮ ಈ ಸರೋವರದಲ್ಲಿ ಕಾವ್ಯಗುಚ್ಛವಾಗಿ ಜೀವ ತಳೆದಿದೆ ಎಂಬುದು ಈ ಪರಿಸರವನ್ನು ಕಂಡರೆ ಭಾಸವಾಗುತ್ತಿದೆ ಎಂದು ಭಾವಪರವಶರಾದರು.
ಸ್ವಂತ ಹಣದಲ್ಲಿ ಕಮಾನು ನಿರ್ಮಾಣ: ಗುತ್ತಿಗೆದಾರನಾಗಿ ಕೆಲಕಾಲ ಕಿಕ್ಕೇರಿಯಲ್ಲಿ ವಾಸವಾಗಿದ್ದ ವೇಳೆ ಈ ತಾಣ ಕಂಡು ವಿಸ್ಮಿತನಾಗಿದ್ದೆ. ಸಿರಿಗೆರೆಯಾಗಿದ್ದ ತಾಣ ಇಂದು ಟ್ರಸ್ಟ್ ಅಧ್ಯಕ್ಷ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರ ಪರಿಶ್ರಮದಿಂದ ಕೆಎಸ್‌ನ ಸರೋವರವಾಗಿದೆ. ಕೆಎಸ್‌ನ ಸ್ವಾಗತ ಕಮಾನುಗಳನ್ನು ಕಿಕ್ಕೇರಿ ಕೃಷ್ಣಮೂರ್ತಿ ತಮ್ಮ ಸ್ವಂತ ಹಣದಲ್ಲಿ ನಿರ್ಮಿಸಿದ್ದಾರೆಯಾವುದೇ ಅನುದಾನ ನೀಡಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷೀಯ ನುಡಿಯಾಡಿದ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ನನ್ನ ಬಲುದಿನದ ಕನಸು ನನಸಾಗುತ್ತಿದೆ. ನನ್ನ ಗಾಯನ ಕ್ಷೇತ್ರದ ಪಯಣಕ್ಕೆ ಕೆಎಸ್‌ನ ಮೂಲಪ್ರೇರಣೆ. ತನ್ನ ಶ್ರೇಯಸ್ಸಿನ ಹಿಂದೆ ಗ್ರಾಮಸ್ಥರ, ಟ್ರಸ್ಟಿಗಳ ಸಹಕಾರವಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಕೆಎಸ್‌ನ ಗೀತೆ ಭವಿಷ್ಯದ ಮಕ್ಕಳಲ್ಲಿ ಉಳಿಯಲು ಉಚಿತ ತರಬೇತಿ, ಶಿಬಿರ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಟ್ರಸ್ಟಿ ಸುರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಸಕ ಎಚ್.ಟಿ.ಮಂಜು, ಕೆಪಿಸಿಸಿ ಸದಸ್ಯ ಸುರೇಶ್, ಟ್ರಸ್ಟಿ ಸ್ಟಾರ್ ಚಂದ್ರು, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕುಮಾರ ಕೊಪ್ಪ, ಜಿಪಂ ಮಾಜಿ ಸದಸ್ಯ ಡಿ.ದೇವರಾಜು, ಮಂಜೇಗೌಡ, ಪ್ರೇಮಕುಮಾರ್, ತಾ. ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್, ಬಿ.ಎಲ್.ದೇವರಾಜು, ಬಿ.ಪ್ರಕಾಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಂಬರೀಷ್, ಆರ್‌ಟಿಒ ಮಲ್ಲಿಕಾರ್ಜುನ, ಟ್ರಸ್ಟಿಗಳಾದ ಅಪ್ಪಗೆರೆ ತಿಮ್ಮರಾಜು, ಸುರೇಶ್, ಮಾದಾಪುರ ಸುಬ್ಬಣ್ಣ, ಮೇಖಲಾ ವೆಂಕಟೇಶ್, ಶ್ರೀನಿವಾಸ ಉಡುಪ, ಹಲಗೇಗೌಡ, ಕೆ.ವಿ.ಬಲರಾಮು, ಶ್ರೀವಲ್ಲಿ, ಕವಿ ನಾ.ದಾಮೋದರ ಶೆಟ್ಟಿ ಮತ್ತಿತರರಿದ್ದರು.
ಜಾನಪದ ಜಾತ್ರೆ ಸಾಗರ: ಇಲ್ಲಿನ ಪ್ರಮುಖ ಬೀದಿಯಲ್ಲಿ ಸಾಗಿದ ಡೊಳ್ಳಿನ ಕಲಾ ತಂಡ, ಮಂಗಳೂರಿನ ಚಂಡೆಯ ಸಪ್ಪಳ, ಗಾರುಡಿ ಗೊಂಬೆ, ವೀರಗಾಸೆ ಕುಣಿತ ಮತ್ತಿತರ ಜಾನಪದ ಕಲಾತಂಡಗಳ ಮೆರವಣಿಗೆಗೆ ಪ್ರೇಕ್ಷಕರು ಮಂತ್ರಮುಗ್ಧರಾದರು. ಪುಟಾಣಿಗಳು ಕುಣಿದು ಕುಪ್ಪಳಿಸಿದರು.