ಶೀಳನೆರೆ ಗ್ರಾಮದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಟಿ.ಮಂಜು ಭೂಮಿಪೂಜೆ ನೆರವೇರಿಸಿದರು. ಹುಲ್ಲೇಗೌಡ, ಟಿ.ಬಲದೇವ್, ಎಚ್.ಡಿ.ಅಶೋಕ್, ಗೌತಮಿ, ಎನ್.ಆರ್.ರಮೇಶ್, ಶಿವಲಿಂಗು ಇತರರಿದ್ದರು. 
ಮಂಡ್ಯ

ಭದ್ರ, ಗಟ್ಟಿಮುಟ್ಟಾಗಿ ಸೇತುವೆ ನಿರ್ಮಿಸಿ

ಅಧಿಕಾರಿಗಳು, ಗುತ್ತಿಗೆದಾರರಿಗೆ ಶಾಸಕ ಎಚ್.ಟಿ.ಮಂಜು ತಾಕೀತು

ಕೆ.ಆರ್.ಪೇಟೆ: ಸಾರ್ವಜನಿಕರ ತೆರಿಗೆ ಹಣದಿಂದ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬಾರದು. 80 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆಯನ್ನು ಭದ್ರವಾಗಿ, ಗಟ್ಟಿಮುಟ್ಟಾಗಿ ನಿರ್ಮಿಸಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ತಾಲೂಕಿನ ಶೀಳನೆರೆ ಗ್ರಾಮದಿಂದ ಕೆ.ಆರ್.ಪೇಟೆ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿನ ಹಳ್ಳದಲ್ಲಿ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹಳ್ಳದಲ್ಲಿ ನೀರು ನಿಲ್ಲುತ್ತಿದ್ದ ಹಿನ್ನೆಲೆಯಲ್ಲಿ ಶೀಳನೆರೆ ಗ್ರಾಮಸ್ಥರು ಪರದಾಡುವಂತಾಗಿತ್ತು. ಸೇತುವೆ ನಿರ್ಮಾಣದಿಂದ ಗ್ರಾಮಸ್ಥರ ಬಹುದಿನದ ಬೇಡಿಕೆ ಈಡೇರುತ್ತಿದೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗಳು ಪ್ರತಿ ದಿನ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರ ಎನ್.ಆರ್.ರಮೇಶ್‌ಗೆ ಸೂಚಿಸಿದರು.

ಸೇತುವೆ ಗ್ರಾಮಸ್ಥರದ್ದಾಗಿದೆ. ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಉಳಿದ ಸಮಯದಲ್ಲಿ ಪಕ್ಷಭೇದ ಮರೆತು ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಸರ್ಕಾರದಲ್ಲಿ ನನ್ನ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಅನುದಾನ ಸರಿಯಾಗಿ ಬರಲಿಲ್ಲ. ಹಾಕಿದ ಯೋಜನೆಗಳಿಗೆ ತಡೆ ಎದುರಾಯಿತು. ಕ್ಷೇತ್ರದ ಅಭಿವೃದ್ಧಿಗೆ ನಾನು ಅಂದುಕೊಂಡಿದ್ದನ್ನು ಮಾಡಲು ಸರ್ಕಾರ ಅವಕಾಶ ನೀಡಲಿಲ್ಲ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ 2028ರ ವಿಧಾನಸಭಾ ಚುನಾವಣೆಯಲ್ಲಿ ನಾನೇ ಸ್ಪರ್ಧಿಸುವುದು ಖಚಿತ. ಅನುಮಾನ ಬೇಡ ಎಂದು ಮಂಜು ಹೇಳಿದರು.

ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಟಿ.ಬಲದೇವ್, ಪುರಸಭೆ ಮಾಜಿ ಸದಸ್ಯ ಎಚ್.ಡಿ.ಅಶೋಕ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಗೌತಮಿ, ಗುತ್ತಿಗೆದಾರ ಎನ್.ಆರ್.ರಮೇಶ್, ಗ್ರಾಪಂ ಮಾಜಿ ಉಪಾಧ್ಯಕ್ಷ ಶಿವಲಿಂಗು, ಮುಖಂಡರಾದ ಶೀಳನೆರೆ ರಾಘು, ನಾಟನಹಳ್ಳಿ ಎನ್.ಜಿ.ಸಾಗರ್, ಕೆ.ಎನ್.ರಾಘವೇಂದ್ರ, ಪ್ರಸನ್ನ, ವಿಜಯ ಕುಮಾರ್ ಇತರರಿದ್ದರು.