ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಉಚಿತ ಪ್ಲಾಸ್ಟಿಕ್ ಸರ್ಜರಿ ಶಿಬಿರದಲ್ಲಿ ನೊಂದಾಯಿಸಿಕೊಂಡು ವೈದ್ಯರ ತಂಡದಿಂದ ತಪಾಸಣೆಗೊಳಗಾಗಿರುವ ರೋಗಿಗಳನ್ನು ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಅವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಡಾ. ರವಿ ಕೆ.ಎಸ್.ಧಮೇರ್ಂದ್ರ, ಶ್ರೇಯಸ್ ಇದ್ದರು. 
ಮಂಡ್ಯ

ಪ್ಲಾಸ್ಟಿಕ್ ಸರ್ಜರಿಗೆ 200 ರೋಗಿಗಳ ನೊಂದಣಿ

ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತ ಶಿಬಿರ, ಅಮೆರಿಕ ವೈದ್ಯರ ತಂಡದಿಂದ ಶಸ್ತ್ರಚಿಕಿತ್ಸೆ

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಉಚಿತವಾಗಿ ನಡೆಯುತ್ತಿರುವ ಪ್ಲಾಸ್ಟಿಕ್ ಸರ್ಜರಿ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 200ಕ್ಕೂ ಹೆಚ್ಚು ರೋಗಿಗಳು ನೊಂದಾಯಿಸಿಕೊಂಡಿದ್ದು ಅಮೆರಿಕದಿಂದ ಆಗಮಿಸಿರುವ ವೈದ್ಯರ ತಂಡದಿಂದ ತಪಾಸಣೆಗೆ ಒಳಪಟ್ಟಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಕೊಡಗು, ಮೈಸೂರು, ಹಾಸನ, ಮಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಂದ ಸುಮಾರು 200ಕ್ಕೂ ಹೆಚ್ಚು ರೋಗಿಗಳು ನೊಂದಾಯಿಸಿಕೊಂಡು ಅಮೆರಿಕದಿಂದ ಬಂದಿರುವ ವೈದ್ಯರ ತಂಡದಿಂದ ಪರಿಶೀಲನೆಗೆ ಒಳಪಟ್ಟಿದ್ದಾರೆ. ಈ ರೋಗಿಗಳನ್ನು ತಪಾಸಣೆ ನಡೆಸುತ್ತಿರುವ ವೈದ್ಯರ ತಂಡ ಶಸ್ತ್ರಚಿಕಿತ್ಸೆ ಅಗತ್ಯ ಇರುವವರಿಗೆ ಹಾಗೂ ಬಡವರಿಗೆ, ಚಿಕ್ಕ ಮಕ್ಕಳಿಗೆ ಮೊದಲ ಆದ್ಯತೆಯ ಮೇರೆಗೆ ಶಸ್ತ್ರಚಿಕಿತ್ಸೆಗೆ ಅಂತಿಮಗೊಳಿಸಲಿದೆ.

ನೊಂದಾಯಿಸಿಕೊಂಡಿರುವ ರೋಗಿಗಳನ್ನು ಮಂಗಳವಾರ ಆದಿಚುಂಚನಗಿರಿ ನಾಗಮಂಗಲ ಶಾಖೆಯ ಶ್ರೀ ಸತ್ಕೀರ್ತಿನಾಥ ಸ್ವಾಮೀಜಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಸುಟ್ಟ ಗಾಯಗಳ ಬಗ್ಗೆ ಮಾಹಿತಿ ಪಡೆದು ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿದರು. ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಮಾಹಿತಿ ಪಡೆದ ನಂತರ ಅಮೆರಿಕದಿಂದ ಶಸ್ತ್ರಚಿಕಿತ್ಸೆಗೆ ಆಗಮಿಸಿರುವ ವೈದ್ಯರ ತಂಡದೊಂದಿಗೆ ಚರ್ಚಿಸಿದರು.

ನಂತರ ಮಾತನಾಡಿದ ಶ್ರೀಗಳು, ಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರದ ಮುಖ್ಯ ಉದ್ದೇಶ ಸೀಳು ತುಟಿ, ಅಂಗುಳಿನ ಸೀಳು, ಸುಟ್ಟಗಾಯಗಳಿಂದ ಉಂಟಾದ ಗುರುತುಗಳು, ಗಾಯಗಳಿಂದ ಉಂಟಾದ ವಿರೂಪಗಳು ಹಾಗೂ ಜನ್ಮಜಾತ ದೈಹಿಕ ವೈಕಲ್ಯಗಳಿಂದ ಬಳಲುತ್ತಿರುವವರಿಗೆ ಅಗತ್ಯ ಮರು ನಿರ್ಮಾಣಾತ್ಮಕ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಒದಗಿಸುವುದಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ತಲುಪಿಸುವುದು ಈ ಶಿಬಿರದ ಪ್ರಮುಖ ಉದ್ದೇಶವಾಗಿದೆ ಎಂದರು.

ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರವಿ ಕೆ.ಎಸ್, ಆಸ್ಪತ್ರೆಯ ಪಿಆರ್‌ಒ ಧರ್ಮೇಂದ್ರ, ಶ್ರೇಯಸ್ ಮತ್ತಿತರರಿದ್ದರು.